ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಮೀಪದಲ್ಲೇ ಇರುವ ಕುಮಾರಧಾರಾ ಹಳೇ ಸೇತುವೆಯ ನೆಕ್ಕಿಲಾಡಿ ಸಂಪರ್ಕದ ರಸ್ತೆ ಹೊಂಡಗುಂಡಿಗಳು, ಕೆಸರಿನಿಂದ ತುಂಬಿ ವಾಹನ ಸಂಚಾರವೇ ಅಸಾಧ್ಯವಾಗಿದ್ದು, ಗ್ರಾಮ ಪಂಚಾಯಿತಿಯ ಕಳಪೆ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಿಗೆ ಹಳೇ ಸೇತುವೆ ನಿರ್ಮಾಣವಾಗಿ 90 ವರ್ಷವಾಗಲಿದೆ. ಈ ಮಾರ್ಗದಲ್ಲಿ ಪಾದಚಾರಿಗಳು ನಡೆದಾಡುವುದೇ ಸಾಹಸವಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸದ ಕಾರಣ ಪ್ರಸ್ತುತ ರಸ್ತೆಯಿಡೀ ಮಳೆ ನೀರು ತುಂಬಿದೆ.
ರಸ್ತೆ ದುಸ್ಥಿತಿ ಕುರಿತು ಸಂಬಂಧಿತ ಅಧಿಕಾರಿಗಳು, ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಲಾಗಿದ್ದು, ಇದುವರೆಗೆ ಸ್ಪಂದನೆ ದೊರೆತಿಲ್ಲ. ನಿತ್ಯವೂ ಇದೇ ಮಾರ್ಗದಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ ಎದುರಾಗಿದ್ದು, ಶೀಘ್ರವೇ ರಸ್ತೆ ಸಮಸ್ಯೆ ನಿವಾರಣೆಗೆ ಶಾಶ್ವತ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ.