ವಿದ್ಯುತ್ ಉತ್ಪಾದನೆಗೆ ಸಿದ್ಧಗೊಂಡ ನೀರಕಟ್ಟೆ ಘಟಕ

ನೀರಕಟ್ಟೆ ಪವರ್ ಪ್ರಾಜೆಕ್ಟ್.
ನೀರಕಟ್ಟೆ ಪವರ್ ಪ್ರಾಜೆಕ್ಟ್.
Published on
ಉಪ್ಪಿನಂಗಡಿ: ಭೀಕರ ನೆರೆಗೆ ಸಿಲುಕಿ ಕಾರ್ಯ ಸ್ಥಗಿತಗೊಳಿಸಿದ್ದ ನೀರಕಟ್ಟೆಯ ಸಾಗರ್ ಪವರ್ ಪ್ರಾಜೆಕ್ಟ್ ಇದೀಗ ಎಲ್ಲ ಅಡೆತಡೆಗಳನ್ನು ದಾಟಿ ಈ ವರ್ಷದ ಮಳೆಗಾಲದಲ್ಲಿ ಮತ್ತೆ ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿದೆ.
2019ರಲ್ಲಿ ನೇತ್ರಾವತಿ ನದಿಯಲ್ಲಿ ಉಂಟಾದ ಭಾರಿ ನೀರಿನ ಪ್ರವಾಹದಿಂದ ದಿಢೀರ್ ನೆರೆಯುಂಟಾಗಿ ನೆರೆ ನೀರು ವಿದ್ಯುತ್ ಉತ್ಪಾದನಾ ಘಟಕದೊಳಗೆ ನುಗ್ಗಿ ಹಾನಿಯುಂಟಾಗಿತ್ತು. ಪರಿಣಾಮ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಬಳಿಕ ಆಡಳಿತಾತ್ಮಕ ಸಮಸ್ಯೆ ಎದುರಾಗಿ ಐದಾರು ವರ್ಷಗಳ ಕಾಲ ವಿದ್ಯುತ್ ಉತ್ಪಾದನಾ ಘಟಕ ಸಂಪೂರ್ಣ ಸ್ತಬ್ಧಗೊಂಡು ಅಣೆಕಟ್ಟಿನ ಎಲ್ಲ ಗೇಟು ತೆರಯಲ್ಪಟ್ಟು ನದಿ ನೀರು ಸರಾಗವಾಗಿ ಹರಿಯುವಂತಾಗಿತ್ತು.
ಪುನರಾರಂಭ: ನೂತನ ಆಡಳಿತ ವ್ಯವಸ್ಥೆ ರಚನೆಯಾಗಿ ವಿದ್ಯುತ್ ಉತ್ಪಾದನಾ ಘಟಕವನ್ನು ಪುನರಾರಂಭಿಸಲು ಮುಂದಾಗಿದೆ. ಅದರಂತೆ ಘಟಕದ ಯಂತ್ರೋಪಕರಣ ಸುಸ್ಥಿತಿಗೊಳಪಡಿಸುವ ಕಾರ್ಯ ಭರದಿಂದ ನಡೆದಿದ್ದು, ಈ ಬಾರಿಯ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
ಪ್ರಸಕ್ತ ನೇತ್ರಾವತಿ ನದಿಯಲ್ಲಿ ಅಣೆಕಟ್ಟನ್ನು ನಿರ್ಮಿಸಿ ಚಾರ್ಮಾಡಿ, ದೊಂಡೊಳೆ, ನೆರಿಯ, ಹಣಿಯೂರು, ನೀರಕಟ್ಟೆ, ಶಂಭೂರು ಹೀಗೆ ಆರು ಕಡೆಗಳಲ್ಲಿ ಜಲವಿದ್ಯುತ್ ಘಟಕ ನಿರ್ಮಿಸಲಾಗಿದ್ದು, ನದಿ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ಪ್ರಾಕೃತಿಕ ಸಂಪತ್ತಿನ ಸದ್ಬಳಕೆ ಗುರಿ ಹೊಂದಲಾಗಿದೆ. ನೀರಕಟ್ಟೆ ಘಟಕದಿಂದ 15 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಅದನ್ನು ಗುರುವಾಯನಕೆರೆ ಸಬ್ ಸ್ಟೇಷನ್‌ಗೆ ವಿತರಿಸಲಾಗುತ್ತಿತ್ತು.
ನೀರಕಟ್ಟೆ ಜಲ ವಿದ್ಯುತ್ ಸ್ಥಾವರದ ಅಣೆಕಟ್ಟಿನಲ್ಲಿ 8 ಗೇಟ್‌ಗಳಿದ್ದು, 3 ಟರ್ಮಿನಲ್ ಮೂಲಕ ನೀರು ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎರಡು ದಿನಗಳಿಂದ ಅಣೆಕಟ್ಟಿನ ಗೇಟು ಅಳವಡಿಸಲಾಗಿದೆ.

ಈ ವರ್ಷದ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಐದಾರು ವರ್ಷಗಳಲ್ಲಿ ಸ್ಥಾವರ ಸ್ಥಗಿತಗೊಂಡ ಕಾರಣಕ್ಕೆ ತಾಂತ್ರಿಕ ವ್ಯವಸ್ಥೆಯಲ್ಲಿ ಸಮರ್ಪಕತೆ ಸಾಧಿಸಿದ ತಕ್ಷಣ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಾಗುವುದು. ಎರಡು ದಿನಗಳ ಹಿಂದೆ ಅಣೆಕಟ್ಟಿನ ಎಲ್ಲ ಗೇಟು ಹಾಕಲಾಗಿದ್ದು, ಸಮುದ್ರ ಮಟ್ಟದಿಂದ 38 ಮೀ. ಎತ್ತರದವರೆಗೆ ನೀರಿನ ಸಂಗ್ರಹ ಸ್ಥಾವರದಲ್ಲಿ ಸಂಗ್ರಹಿಸಲಾಗುವುದು. ಅದಕ್ಕಿಂತ ಹೆಚ್ಚು ನೀರು ನದಿಯಲ್ಲಿ ಬಂದಲ್ಲಿ ಗೇಟು ತೆರೆದು ನೀರಿನ ಮಟ್ಟವನ್ನು ಅಗತ್ಯಕ್ಕೆ ತಕ್ಕಂತೆ ಕಾಯ್ದುಕೊಳ್ಳಲಾಗುವುದು.

— ಸುರೇಶ್ ಬಂಗೇರ, ಸ್ಥಾವರದ ಮ್ಯಾನೇಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net