

ಉಡುಪಿ: ಪ್ರಜಾಪ್ರಭುತ್ವದ ಮೌಲ್ಯ ಮತ್ತು ಪವಿತ್ರವಾದ ಮತದಾನದ ಹಕ್ಕು ಇಂದು ಸವಾಲು ಎದುರಿಸುವಂತಾಗಿದೆ. ಇವುಗಳ ವಿರುದ್ಧ ಧ್ವನಿಯೆತ್ತಲು ಅಖಿಲ ಭಾರತ ಕಾಂಗ್ರೆಸ್ ವತಿಯಿಂದ ದೇಶವ್ಯಾಪಿ 'ವೋಟ್ ಬಚಾವೋ, ದೇಶ್ ಬಚಾವೋ' ಜನಾಂದೋಲನ ಹಮ್ಮಿಕೊಳ್ಳಲಾಗಿದ್ದು, ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ ಎಂದು ಅಭಿಯಾನದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ, ಎಐಸಿಸಿ ವೀಕ್ಷಕ ಹಾಗೂ ಸಿಡಬ್ಲ್ಯುಸಿ ಸದಸ್ಯ ಕಮಲೇಶ ಪಟೇಲ ತಿಳಿಸಿದರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ (ಅ.25) ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಮಗ್ರ ಕ್ರಿಯಾ ಯೋಜನೆ
ಎಲ್ಲ ರಾಜ್ಯಗಳಲ್ಲಿಯೂ ಈ ಆಂದೋಲನ ಯಶಸ್ವಿಗೊಳಿಸಲು ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗಿದೆ. ಎಲ್ಲ ಹಂತಗಳಲ್ಲಿಯೂ ಈ ಅಭಿಯಾನ ಯಶಸ್ವಿಗೊಳಿಸಬೇಕಿದೆ. ನ.1ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಪ್ರತಿ ಜಿಲ್ಲೆಯಿಂದ ಕನಿಷ್ಠ 100 ಕಾರ್ಯಕರ್ತರು ಪಾಲ್ಗೊಳ್ಳಬೇಕು. ಜಿಲ್ಲೆ, ಬ್ಲಾಕ್ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಈ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದರು.
ಮತ ಕಸಿಯುವ ಪಿತೂರಿ
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಮತ ಕಸಿಯಲು ಪಿತೂರಿ ನಡೆಯುತ್ತಿದೆ. ನ.5ರಂದು ಕೆಪಿಸಿಸಿ ವತಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ 'ವೋಟ್ ಬಚಾವೋ, ದೇಶ್ ಬಚಾವೋ' ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗೂರ್, ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ನಿಗಮದ ಅಧ್ಯೆ ಲಾವಣ್ಯಾ ಬಲ್ಲಾಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮುಖಂಡರಾದ ಪ್ರಸಾದರಾಜ ಕಾಂಚನ್, ರಾಜ ಪೂಜಾರಿ, ದಿನೇಶ ಮೊಳಹಳ್ಳಿ, ಮುನಿಯಾಲು ಉದಯಕುಮಾರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ನ ಎಲ್ಲ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ ಕಿಣಿ ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.