ಉಡುಪಿಯ ಲೊಂಬಾರ್ಡ್​ ಆಸ್ಪತ್ರೆಗೆ ರಾಷ್ಟ್ರೀಯ ಪ್ರಶಸ್ತಿ

ಉಡುಪಿಯ ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಗೆ ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳು ವಿಭಾಗದಲ್ಲಿ ಲಭಿಸಿದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಹೆಲ್ಪ್​ ಸಂಸ್ಥೆಯ ಪ್ರಮುಖರಿಂದ ಡಾ. ಸುಶೀಲ್​ ಜತ್ತನ್ನ ಸ್ವೀಕರಿಸಿದರು.
ಉಡುಪಿಯ ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಗೆ ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳು ವಿಭಾಗದಲ್ಲಿ ಲಭಿಸಿದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಹೆಲ್ಪ್​ ಸಂಸ್ಥೆಯ ಪ್ರಮುಖರಿಂದ ಡಾ. ಸುಶೀಲ್​ ಜತ್ತನ್ನ ಸ್ವೀಕರಿಸಿದರು.
Published on

* ಪುರಸ್ಕಾರ ಸ್ವೀಕರಿಸಿದ ಡಾ.ಸುಶೀಲ್​ ಜತ್ತನ್ನ

* ಹಸಿರು ಇಂಧನ ದಕ್ಷತಾ ವಿಭಾಗದಲ್ಲಿ ಆಯ್ಕೆ

ಉಡುಪಿ: ಸಿಎಸ್​ಐ ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಯು ಸುಸ್ಥಿರ ಆರೋಗ್ಯ ಸೇವೆ ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಆರೋಗ್ಯ ಮತ್ತು ಪರಿಸರ ನಾಯಕತ್ವ ವೇದಿಕೆ (ಹೆಲ್ಪ್​ ಸಂಸ್ಥೆ)ಯ 2026ನೇ ಸಾಲಿನ ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳು ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಹೆಲ್ಪ್​ ಸುಸ್ಥಿರತಾ ಶ್ರೇಷ್ಠತಾ ಪ್ರಶಸ್ತಿಗೆ ಭಾಜನವಾಗಿದೆ.
ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್​ ಜತ್ತನ್ನ ಅವರು ಜೂ.20ರಂದು ಹೈದರಾಬಾದ್​ನ ಹೈಟೆಕ್​ ಸಿಟಿಯ ಯಶೋದಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಹೆಲ್ಪ್​ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಇನ್ ಸ್ಪೈರ್ ಯೋಜನೆ 

ಡಾ. ಸುಶೀಲ್​ ಜತ್ತನ್ನ ನೇತೃತ್ವದಲ್ಲಿ 2024ರ ಜೂನ್​ನಲ್ಲಿ ಲೋಂಬಾರ್ಡ್​ ಆಸ್ಪತ್ರೆಯಲ್ಲಿ ಆರಂಭಿಸಲಾದ 'ಇನ್ ಸ್ಪೈರ್​' ಹಸಿರು ಆಸ್ಪತ್ರೆ ಯೋಜನೆಯ ಅನುಷ್ಠಾನದ ಬಳಿಕ ಈ ಮಾನ್ಯತೆ ದೊರೆತಿದೆ. ಯೋಜನೆಯಡಿ ಆಸ್ಪತ್ರೆಯಲ್ಲಿ ಸೌರ ವಿದ್ಯುತ್​ ವ್ಯವಸ್ಥೆ, ಇಂಧನ ಹಾಗೂ ನೀರಿನ ಸಂರಕ್ಷಣಾ ಕ್ರಮ, ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ, ಆಸ್ಪತ್ರೆ ಆವರಣದಲ್ಲಿ ಹಸಿರೀಕರಣ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜನ ನೀಡಲಾಗಿದೆ. ಹವಾಮಾನ ಬದಲಾವಣೆ ಹಾಗೂ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಹಸಿರು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶತಮಾನ ಕಂಡ ಮಿಷನ್​ ಆಸ್ಪತ್ರೆ

ಸ್ವಿಸ್​ ಮೂಲದ ಮಿಷನರಿ ವೈದ್ಯೆ ಡಾ. ಇವಾ ಲೊಂಬಾರ್ಡ್​ ಅವರು 1923ರಲ್ಲಿ ಸ್ಥಾಪಿಸಿದ ಸಿಎಸ್​ಐ ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಯು ಕರಾವಳಿ ಕರ್ನಾಟಕದ ಮುಂಚೂಣಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ಮಾನ್ಯತಾ ಮಂಡಳಿ (ಎನ್​ಎಬಿಎಚ್​)ಯ ಮಾನ್ಯತೆ ಲಭಿಸಿದೆ. ಆಸ್ಪತ್ರೆಯು ವಿವಿಧ ಪ್ರಮುಖ ವೈದ್ಯಕಿಯ ವಿಭಾಗಗಳು ಮತ್ತು ಆರೋಗ್ಯ ಸೌಲಭ್ಯಗಳ ಮೂಲಕ ಸೇವೆ ಸಲ್ಲಿಸುತ್ತಿದೆ. 
"

ಪರಿಸರದ ಮಾನ್ಯತೆ, ಆರೋಗ್ಯ ಸೇವೆ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಆಸ್ಪತ್ರೆಯ ಇನ್ ಸ್ಪೈರ್​ ಯೋಜನೆಯ ಬದ್ಧತೆ, ಕಾರ್ಯನಿರ್ವಹಣೆಯಿಂದ ಹಸಿರು ಪ್ರಶಸ್ತಿ ಲಭಿಸಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ತಳಮಟ್ಟದಿಂದ ಶ್ರಮಿಸಿದ ಆಸ್ಪತ್ರೆಯ ಸಿಬ್ಬಂದಿ, ವಿದ್ಯಾರ್ಥಿಗಳು, ವೈದ್ಯರು ಹಾಗೂ ಇತರ ಸಹಯೋಗಿಗಳ ಕೊಡುಗೆ ಕಾರಣವಾಗಿದೆ. ಸುಸ್ಥಿರತೆಯ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲು ನೆರವಾದ ಸ್ವಿಟ್ಜರ್​ಲೆಂಡ್​ನ ಲೊಂಬಾರ್ಡ್​ ಪ್ರತಿಷ್ಠಾನ ಹಾಗೂ ಅದರ ಸಲಹೆಗಾರರ ಸಹಕಾರವನ್ನೂ ನಾನು ಸ್ಮರಿಸಿಕೊಳ್ಳುತ್ತೇನೆ. ನಮ್ಮ ಸುಸ್ಥಿರತಾ ಕಾರ್ಯಕ್ರಮ ಮುಂದುವರಿಯಲಿದೆ.

— ಡಾ. ಸುಶೀಲ್​ ಜತ್ತನ್ನ. ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಯ ನಿರ್ದೇಶಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net