

ಉಡುಪಿ: ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರಾ ಸಂಸ್ಥೆ, ನುಕ್ಸರ್ ವಿಜ್ಞಾನ ವಿಭಾಗ ಹಾಗೂ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾವಿದ್ಯಾಲಯ, ಪರ್ಯಾಯ ಶ್ರೀ ಶೀರೂರು ಮಠದ ಆಶ್ರಯದಲ್ಲಿ ಜ್ಯೋತಿರ್ವಿಜ್ಞಾನ ರಾಷ್ಟ್ರೀಯ ಸಮ್ಮೇಳನ ಅ. 31ರಂದು ಸಂಸ್ಕೃತ ಮಹಾವಿದ್ಯಾಲಯದ ಭೀಮಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರಾ ವಿಭಾಗದ ನಿರ್ದೇಶಕ ಡಾ. ಸುಧೀರರಾಜ್ ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9.30ಕ್ಕೆ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. (ಡಾ.) ಎಂ. ಎಸ್. ಮೂಡಿತ್ತಾಯ ಅಧ್ಯಕ್ಷತೆಯನ್ನು ವಹಿಸಿ, ಜ್ಯೋರ್ತಿವಿಜ್ಞಾನಮ್ ಸಂಶೋಧನಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಜ್ಯೋತಿಷ ಪ್ರಾಧ್ಯಾಪಕ ಪ್ರೊ. ಎ. ಶ್ರೀಪಾದ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೆನರಾ ಬ್ಯಾಂಕಿನ ಸಹಾಯಕ ಮುಖ್ಯ ಪ್ರಬಂಧಕ ಟಿ. ಎಸ್. ಎನ್. ಪೂರ್ಣಾನಂದ, ಎಸ್.ಎಂ.ಎಸ್.ಪಿ. ಸಭಾದ ಖಜಾಂಚಿ ಚಂದ್ರಶೇಖರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ವದ್ಗೋಷ್ಠಿಯಲ್ಲಿ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಸುಂದರೇಶ್ವರನ್, ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಉಪನ್ಯಾಸಕ ಡಾ. ವಾಣಿಶ್ರೀ ಭಟ್, ಮೈಸೂರಿನ ಜ್ಯೋತಿರ್ಧಾಮ ವೇದಶಾಲಾ ಭಾರತೀ ಯೋಗಧಾಮದ ಸಂಶೋಧಕ ಅಮೋಘ ಶಮಾರ್, ಬೆಂಗಳೂರಿನ ಸಾರಸ್ವತ ಸಂಸ್ಥಾನದ ಹಿರಿಯ ಸಂಶೋಧಕ ಡಾ. ರಜತ್ ವಾಸುದೇವ ಮೂರ್ತಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.
ಸಂಜೆ 4:15 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ. ಹರ್ಷ ಹಲಹಳ್ಳಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎ. ಪಿ. ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎಸ್. ಎಂ. ಸ್. ಪಿ. ಸಭಾದ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸ್ ಮುಖ್ಯ ಅತಿಥಿಗಳಾಗಿರುವರು ತಿಳಿಸಿದರು.
ಪರ್ಯಾಯ ಶೀರೂರು ಮಠದ ದಿವಾನ್ ಡಾ. ಉದಯಕುಮಾರ ಸರಳತ್ತಾಯ ಮಾತನಾಡಿ, ಪ್ರಾಚಿನ- ಮತ್ತು ಆಧುನಿಕವಿಜ್ಞಾನಗಳಿಗೆ ಕೊಂಡಿಯಂತಿರುವ ಸಮ್ಮೇಳನದಲ್ಲಿ ಸಮಗ್ರ ಭಾರತದಿಂದ ವಿಮರ್ಶಾತ್ಮಕ ಪ್ರಬಂಧಗಳನ್ನು ವಿದ್ವಾಂಸರಿಂದ ಸಂಗ್ರಹಿಸಿ ಜ್ಯೋರ್ತಿವಿಜ್ಞಾನಮ್ ಎಂಬ ಹೆಸರಿನ ಶೋಧಪತ್ರಿಕೆಯು ಪ್ರಕಟವಾಗಲಿದೆ. ಗ್ರಹ-ನಕ್ಷತ್ರ ಹಾಗೂ ಪ್ರಾಚಿನ ಆಕಾಶ ವೀಕ್ಷಣಾ ಪದ್ಧತಿಯ ಬಗ್ಗೆ ಪ್ರಾಯೋಗಿಕ ವಿವರಣೆ ನೀಡುವ ಜ್ಯೋತಿರ್ಮಯೀ ವ್ಯೋಮದರ್ಶಿನೀ ಎಂಬ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ನುಕ್ಸರ್ ಎಂಬ ವಿಜ್ಞಾನವಿಭಾಗದ ನಿರ್ದೇಶಕ ಡಾ. ಅನಿರ್ಭಾನ್ ಚಕ್ರವರ್ತಿ, ಉಡುಪಿಯ ಎಸ್. ಎಂ. ಎಸ್. ಪಿ. ಸಂಸ್ಕೃತ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಡಾ. ಅಮೃತೇಶಾಚಾರ್ಯ ಡಿ. ಎಸ್., ಜ್ಯೋತಿಷ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಡಿ. ಶಿವಪ್ರಸಾದ ತಂತ್ರಿ, ಷಣ್ಮುಖ ಹೆಬ್ಬಾರ್ ಉಪಸ್ಥಿತರಿದ್ದರು.