ಶಿರೂರು ಮಠದ ಪರ್ಯಾಯಕ್ಕೆ ಮುಸ್ಲೀಮರಿಂದ ಹೊರೆಕಾಣಿಕೆ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಜಿ ಕೆ. ಅಬುಬಕ್ಕರ್​ ಮಾತನಾಡಿದರು. ಎಂ.ಪೀರು ಸಾಹೇಬ್​, ಚಾರ್ಲ್ಸ್​ ಅಂಬ್ಲರ್​, ರಿಯಾಜ್​ ಪಳ್ಳಿ, ಅನ್ಸಾರ್​ ಅಹಮ್ಮದ್​, ಆರೀಫ್ ಉಡುಪಿ, ರಫೀಕ್​ ದೊಡ್ಡನಗುಡ್ಡೆ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಜಿ ಕೆ. ಅಬುಬಕ್ಕರ್​ ಮಾತನಾಡಿದರು. ಎಂ.ಪೀರು ಸಾಹೇಬ್​, ಚಾರ್ಲ್ಸ್​ ಅಂಬ್ಲರ್​, ರಿಯಾಜ್​ ಪಳ್ಳಿ, ಅನ್ಸಾರ್​ ಅಹಮ್ಮದ್​, ಆರೀಫ್ ಉಡುಪಿ, ರಫೀಕ್​ ದೊಡ್ಡನಗುಡ್ಡೆ ಇದ್ದರು.
Published on

* ಸೌಹಾರ್ದ ಸಮಿತಿ ಅಧ್ಯಕ್ಷ ಹಾಜಿ ಕೆ. ಅಬುಬಕ್ಕರ್​ ಮಾಹಿತಿ

* ಜ.9ರಂದು ತಂಪು ಪಾನೀಯ, ಜ.18ರಂದು ನೀರಿನ ಬಾಟಲಿ ವಿತರಣೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಹಿಂದು-ಮುಸ್ಲೀಮರ ಸೌಹಾರ್ದತೆಗೂ ಸಹ ಶತಮಾನದ ಇತಿಹಾಸವಿದ್ದು, ಪುರಾತನ ಕಾಲದಿಂದಲೂ ಇರುವ ಐಕ್ಯತೆ ಮುನ್ನಡೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹಲವು ವರ್ಷದಿಂದ ಕಾರ್ಯಕ್ರಮ ಆಯೋಜಿಸುತ್ತಲೇ ಬಂದಿದೆ. ಈ ಬಾರಿಯ ಶಿರೂರು ಮಠದ ಪರ್ಯಾಯದ ನಿಮಿತ್ತ ಸಂಘಟನೆ ವತಿಯಿಂದ ಬೃಹತ್​ ಪ್ರಮಾಣದಲ್ಲಿ ಹೊರೆಕಾಣಿಕೆ ಸಮರ್ಪಿಸಲಿದ್ದೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ-2026ರ ಅಧ್ಯಕ್ಷ ಹಾಜಿ ಕೆ. ಅಬುಬಕ್ಕರ್​ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜ.3) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಎಂ.ಎ. ಗಫೂರ್​ ಅವರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಮೆರವಣಿಗೆಯಲ್ಲಿ ದಫ್​ ಕಾರ್ಯಕ್ರಮ

ಜ.9ರಂದು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ ಸಂದರ್ಭದಲ್ಲಿ ಪಾಲ್ಗೊಳ್ಳುವ ಸಾವಿರಾರು ಭಕ್ತರಿಗೆ ಸಮಿತಿ ವತಿಯಿಂದ ತಂಪು ಪಾನೀಯ ವಿತರಿಸಲಿದ್ದೇವೆ. ಜ.13ರಂದು ಹೊರೆಕಾಣಿಕೆ ಸಮರ್ಪಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜೋಡುಕಟ್ಟೆಯಿಂದ ಅಂದು ಮಧ್ಯಾಹ್ನ 3:30ಕ್ಕೆ 45ಕ್ಕೂ ಅಧಿಕ ವಾಹನಗಳ ಮೂಲಕ ಬೃಹತ್​ ಪ್ರಮಾಣದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಸಲಿದ್ದೇವೆ. ಈ ವೇಳೆ ಮುಸ್ಲೀಮರ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾದ ದಫ್​ ಹೊಡೆಯುವ ಜಾನಪದ ಕಾರ್ಯಕ್ರಮ ನಡೆಯಲಿದೆ. ಜ.18ರಂದು ಪರ್ಯಾಯ ಮಹೋತ್ಸವದ ದಿನವೂ ಸಹ 10 ಸಾವಿರ ಕುಡಿಯುವ ನೀರಿನ ಬಾಟಲಿ ವಿತರಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಪೀರು ಸಾಹೇಬ್​, ಉಡುಪಿ ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್​ ಅಂಬ್ಲರ್​, ಉದ್ಯಾವರ ಗ್ರಾಪಂ ಸದಸ್ಯ ರಿಯಾಜ್​ ಪಳ್ಳಿ, ಅನ್ಸಾರ್​ ಅಹಮ್ಮದ್​, ಆರೀಫ್ ಉಡುಪಿ, ರಫೀಕ್​ ದೊಡ್ಡನಗುಡ್ಡೆ ಇದ್ದರು.

ಶಾಂತಿ-ಸೌಹಾರ್ದತೆಯ ಸಂಕೇತ

ಸಮಿತಿ ಸದಸ್ಯ ಹಾಗೂ ವಕೀಲ ಹಮ್ಜತ್​ ಹೆಜಮಾಡಿ ಮಾತನಾಡಿ, ದೇಶದಲ್ಲಿ ಶಾಂತಿ&ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ಪರ್ಯಾಯ ಮಹೋತ್ಸವಕ್ಕೆ ಮುಸ್ಲಿಂ ಸಮಿತಿಯಿಂದಲೂ ಸಹಕಾರ ನೀಡುತ್ತಿದ್ದೇವೆ. ಮಾನವೀಯತೆಯ ಪ್ರತೀಕವಾಗಿ ಹಾಗೂ ಪ್ರೀತಿಯಿಂದ ನಾವೂ ಸಹ ಉಡುಪಿ ಪರ್ಯಾಯದಲ್ಲಿ ಭಾಗಿಯಾಗುತ್ತಿದ್ದೇವೆ. ಪರ್ಯಾಯ ಎನ್ನುವುದು ಕೇವಲ ಮಠಗಳಿಗೆ ಸೀಮಿತವಲ್ಲ. ಅದು ಉಡುಪಿಯ ಪರ್ಯಾಯ. ಎಲ್ಲ ಧರ್ಮಗಳಿಗೂ ಅದು ಸಂಬಂಧಿಸಿದ ಉತ್ಸವವಾಗಿದೆ. ಕ್ರಿಶ್ಚಿಯನ್​ ಒಕ್ಕೂಟ ಹಾಗೂ ಸಮುದಾಯದವರ ಸಹಭಾಗಿತ್ವದಲ್ಲಿ ಜ.13ರಂದು ಹೊರೆಕಾಣಿಕೆ ಸಮರ್ಪಿಸಲಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net