

ಉಡುಪಿ: ಎರಡು ದಶಕಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದ ಕುಂದಾಪುರ ಮೂಲದ ವ್ಯಕ್ತಿಯನ್ನು ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶ್ ಕುಂದರ್ ಮೃತರು. ದುಷ್ಕರ್ಮಿಗಳು ಇವರ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿಟ್ಟು ಪರಾರಿಯಾಗಿದ್ದಾರೆ.
ಪ್ರಕಾಶ್ ಅವರು ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಶಾರ್ಜಾ ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ 20ರಂದು ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಅಂದು ಮೆಸೇಜ್ ಮೂಲಕ ಮಾತ್ರ ಪ್ರತಿಕ್ರಿಯಿಸಿದ್ದು, ಕರೆ ಮಾಡುವಂತೆ ಸಹೋದರ ಒತ್ತಾಯಿಸಿದ ಬಳಿಕ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಶಂಕೆಗೊಂಡ ಪ್ರಶಾಂತ್, ಪ್ರಕಾಶ್ ಕೆಲಸ ಮಾಡುತ್ತಿದ್ದ ಶಾರ್ಜಾದ ಏರ್ಪೋರ್ಟ್ ಏಜೆನ್ಸಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಕಂಪನಿಯವರು ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಆದರೆ ಪ್ರಕಾಶ್ ಭಾರತಕ್ಕೆ ಬಂದಿರುವ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಶಾರ್ಜಾದಲ್ಲಿದ್ದ ತಮ್ಮ ಸಂಬಂಧಿಕರ ಮೂಲಕ ಸ್ಥಳಿಯ ಪೊಲೀಸರಿಗೆ ದೂರು ನೀಡಿದ್ದರು.
2 ಚೀಲಗಳಲ್ಲಿ ಸಿಕ್ಕಿತು ಮೃತದೇಹ
ಪೊಲೀಸರು ಹುಡುಕಾಟ ಆರಂಭಿಸಿದ ವೇಳೆ ಪ್ರಕಾಶ್ ಅವರದೇ ಕಾರಿನಲ್ಲಿ ಶವ ಪತ್ತೆಯಾಗಿದ್ದು, ದೇಹಕ್ಕೆ ಇರಿತದ ಗಾಯಗಳಾಗಿದ್ದವು. ಎರಡು ಚೀಲಗಳಲ್ಲಿ ಗುರುತು ಸಿಗದಷ್ಟು ಭೀಕರವಾಗಿ ಒಂಬತ್ತು ತುಂಡುಗಳಾಗಿ ಕತ್ತರಿಸಲ್ಪಟ್ಟ ಶವ ಪತ್ತೆಯಾಗಿದೆ. ಬಳಿಕ ಭಾರತದಲ್ಲಿದ್ದ ಸಂಬಂಧಿಕರ ಡಿಎನ್ಎ ಮಾದರಿಯನ್ನು ಪಡೆದು ಪರೀಕ್ಷಿಸಿದಾಗ, ಅದು ಪ್ರಕಾಶ್ ಅವರದ್ದೇ ಮೃತದೇಹ ಎಂದು ಧೃಡಪಟ್ಟಿದೆ.
ಕುಟುಂಬಸ್ಥರಿಂದ ತನಿಖೆಗೆ ಆಗ್ರಹ
ಈ ಪ್ರಕರಣದಲ್ಲಿ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೇರೊಬ್ಬ ವ್ಯಕ್ತಿಯ ನೆರವಿನಿಂದ ಪತ್ನಿಯೇ ಈ ಪೈಶಾಚಿಕ ಕೊಲೆ ಎಸಗಿರಬಹುದೇ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ. ಪ್ರಸ್ತುತ ಯಾರ ಸಂಪರ್ಕಕ್ಕೂ ಸಿಗದ ಆಕೆ, ಭಾರತ ಅಥವಾ ಬೇರೆ ದೇಶಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಪ್ರಕಾಶ್ ಹಾಗೂ ಟೀನಾ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದು, ಟೀನಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪುತ್ರ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಕಾಶ್ ಭಾರತಕ್ಕೆ ಆಗಮಿಸಿದ್ದರು.