ಕೆಸರು ರಸ್ತೆ ಸಂಚಾರ ದುಸ್ಸಾಹಸ

 ಕೆಸರುಗದ್ದೆಯಂತಿರುವ 34ನೇ ನೆಕ್ಕಿಲಾಡಿ ರಸ್ತೆ.
ಕೆಸರುಗದ್ದೆಯಂತಿರುವ 34ನೇ ನೆಕ್ಕಿಲಾಡಿ ರಸ್ತೆ.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಕೆಸರಿನಿಂದ ಕೂಡಿದ ರಸ್ತೆಯಲ್ಲಿ ಸಂಚಾರ ತೀರಾ ದುಸ್ತರವಾಗಿದ್ದು ಪಾದಚಾರಿಗಳ ಕಾಲು ಹೂತು ಹೋಗುವಂತಹ ದುಸ್ಥಿತಿ ಇದೆ. 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸುವ ರಸ್ತೆ ನಡೆದಾಡಲೂ ಸಾಧ್ಯವಾಗದಷ್ಟು ಹದಗೆಟ್ಟಿದ್ದು ಸಾರ್ವಜನಿಕರು ಪಂಚಾಯಿತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಸ್ತುತ ಹೆದ್ದಾರಿಯು ಚತುಷ್ಪಥವಾಗಿ ಪರಿವರ್ತನೆಗೊಂಡ ಬಳಿಕ ಪಾದಚಾರಿಗಳ ಪಾಲಿಗೆ ಉಪ್ಪಿನಂಗಡಿಯ ಕುಮಾರಧಾರಾ ಹಳೇ ಸೇತುವೆ ಸುರಕ್ಷಿತ ಸಂಚಾರ ತಾಣವಾಗಿದೆ. ಈ ಭಾಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿದ ಕಾರಣ ಪಾದಚಾರಿಗಳೆಲ್ಲರೂ ಇದೇ ಸೇತುವೆ ಮಾರ್ಗವಾಗಿ ಉಪ್ಪಿನಂಗಡಿಯನ್ನು ಸಂಪರ್ಕಿಸುತ್ತಾರೆ. ಈಗ ಈ ಸೇತುವೆಯ ಸಂಪರ್ಕ ರಸ್ತೆ ನೆಕ್ಕಿಲಾಡಿ ಭಾಗದಲ್ಲಿ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ನಡೆದಾಡಲೂ ಅಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುವುದು ಈ ರಸ್ತೆಯಲ್ಲಿ ಮಾಮೂಲಾಗಿದೆ.
ಸಮೀಪದಲ್ಲಿರುವ ಹೊಸ ಸೇತುವೆಯ ುಟ್‌ಪಾತ್‌ನಲ್ಲೂ ಕಸಕಡ್ಡಿಗಳು ತುಂಬಿಕೊಂಡಿದ್ದು, ಸಾರ್ವಜನಿಕರು ನಡೆದಾಡಲಾಗದ ಸ್ಥಿತಿಯಲ್ಲಿದೆ. ಜತೆಗೆ ಚತುಷ್ಪಥ ಹೆದ್ದಾರಿಯ ತಡೆಬೇಲಿಯನ್ನು ಸೇತುವೆ ಅಂಚಿನ ತನಕ ಹಾಕಿರುವುದರಿಂದ ಪಾದಚಾರಿಗಳು ುಟ್‌ಪಾತ್‌ನಲ್ಲಿ ಸುರಕ್ಷಿತವಾಗಿ ನಡೆದಾಡುವುದು ಕಷ್ಟಸಾಧ್ಯ.
ಮಾಧ್ಯಮಗಳಲ್ಲಿ ವರದಿ: ಈಗಾಗಲೇ ಹಲವು ಬಾರಿ ಮಾಧ್ಯಮಗಳು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕ ರಸ್ತೆಯ ಶೋಚನೀಯ ಸ್ಥಿತಿ ಕುರಿತು ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸಲು ಪ್ರಯತ್ನಿಸಿವೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯವನ್ನು ಮುಂದುವರಿಸಿದ್ದಾರೆ.

ಲಿಖಿತ ಮನವಿಗೂ ಬೆಲೆ ಇಲ್ಲ

ಮನವಿ ಸಲ್ಲಿಸಿ ತಿಂಗಳು ಕಳೆದರೂ ಸಂಕಷ್ಟದ ಸಂಚಾರ ನಮಗೆ ತಪ್ಪಿಲ್ಲ. ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇದ್ದಾಗ ನಮ್ಮ ಬೇಡಿಕೆಗೆ, ನೋವಿಗೆ ಸ್ಪಂದನೆ ಸಿಗುತ್ತಿತ್ತು. ಆಡಳಿತಾಧಿಕಾರಿಗಳ ಅವಧಿಯಲ್ಲಿ ಏನೂ ಕೆಲಸಗಳಾಗುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿದರೆ ಇಲ್ಲಿನ ದೊಡ್ಡ ಸಮಸ್ಯೆ ಬಗೆಹರಿಯುತ್ತದೆ. ಆದರೆ ಈ ಕುರಿತು ಸ್ಥಳೀಯ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸೇತುವೆಯ ದುಸ್ಥಿತಿಯ ಬಗ್ಗೆ ಪಂಚಾಯಿತಿ ಆಡಳಿತಕ್ಕೆ ಖುದ್ದು ಲಿಖಿತ ಮನವಿ ಸಲ್ಲಿಸಿದ್ದ ನೆಕ್ಕಿಲಾಡಿ ನಿವಾಸಿ ಸುದರ್ಶನ್ ಗಾಣಿಗ.

34ನೇ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಸಂಪರ್ಕ ರಸ್ತೆಯ ದುಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು. ಸ್ಥಳೀಯ ಪಂಚಾಯಿತಿಗೆ ಕ್ರಿಯಾಶೀಲ ಅಧಿಕಾರಿಗಳನ್ನು ನೇಮಿಸಬೇಕು. ಕೂಡಲೇ ರಸ್ತೆಯ ಸಮಸ್ಯೆ ನಿವಾಣೆಯಾಗಿ ಸಂಚಾರ ಯೋಗ್ಯವಾಗಿಸಬೇಕು.

— ಲೋಕೇಶ್ ಆಚಾರ್ಯ, ಕೋಶಾಧಿಕಾರಿ, ಉಪ್ಪಿನಂಗಡಿ ವರ್ತಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net