ಉಡುಪಿಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಹೇಮಂತ್ ಬೊರ್ಲೆ, ಗೀತಾ ಕುಮಾರಿ ಇದ್ದರು.
Published on:
Copied
Follow Us
* ಉಡುಪಿ ಸಂಸದ ಕೋಟ ಪೂಜಾರಿ ಮಾಹಿತಿ
* ಬಿಎಸ್ಎನ್ಎಲ್ ಮುಖ್ಯ ಕಚೇರಿಯಲ್ಲಿ ಸಭೆ
ಉಡುಪಿ: ಜಿಲ್ಲೆಯಲ್ಲಿ ಖಾಸಗಿ ನೆಟ್ವರ್ಕ್ ಸಂಸ್ಥೆಗಳ 500ಕ್ಕೂ ಅಧಿಕ ಟವರ್ಗಳಿದ್ದು ಅವರಂತೆಯೇ ಸೇವೆ ನೀಡಬೇಕಾದರೆ ಬಿಎಸ್ಎನ್ಎಲ್ ಟವರ್ಗಳ ಈಗಿರುವ 235 ಸಂಖ್ಯೆಯನ್ನು 500ರ ವರೆಗೆ ಹೆಚ್ಚಿಸಬೇಕಾಗಿದೆ. ಇನ್ನೂ 200ಕ್ಕೂ ಅಧಿಕ ಬಿಎಸ್ಎನ್ಎಲ್ ಟವರ್ಗಳ ಅಗತ್ಯತೆ ಇದ್ದು, ಅಧಿಕಾರಿಗಳು ಪಟ್ಟಿ ಮಾಡಿಕೊಟ್ಟರೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ ನಗರದಲ್ಲಿರುವ ಬಿಎಸ್ಎನ್ಎಲ್ ಮುಖ್ಯ ಕಚೇರಿಯಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಗುರುವಾರ (ಏ.9) ಆಯೋಜಿಸಿದ್ದ ಸಭೆಯಲ್ಲಿ ಬಿಎಸ್ಎನ್ಎಲ್ ಟವರ್ ಕಾರ್ಯದಕ್ಷತೆ ಹೆಚ್ಚಿಸಲು ಹಾಗೂ ಗ್ರಾಹಕರ ಹಿತರಕ್ಷಣೆಗೆ ಸಂಬಂಧಿಸಿ ಸಮಾಲೋಚನೆ ನಡೆಸಿದರು.
ಹೊಸ 4ಜಿ ಟವರ್
ಜಿಲ್ಲೆಯಲ್ಲಿ ಪ್ರಸ್ತುತ ಬಿಎಸ್ಎನ್ಎಲ್ 196 ಟವರ್ಗಳಿದ್ದು ಇತ್ತೀಚೆಗೆ 39 ಹೊಸ 4ಜಿ ಟವರ್ ಮಂಜೂರಾಗಿದ್ದು, 30 ಟವರ್ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 196ರಲ್ಲಿ 115 ಟವರ್ಗಳನ್ನು 3ಜಿಯಿಂದ 4ಜಿಗೆ ಪರಿವರ್ತನೆ ಮಾಡಲಾಗಿದ್ದು ಈಗ ಸುಮಾರು 235 ಟವರ್ ಸೇವೆಯಲ್ಲಿದೆ. ಈ ಹಿಂದೆ ಟವರ್ಗಳಲ್ಲಿ ಬ್ಯಾಟರಿ ಸಮಸ್ಯೆಗಳಿದ್ದು ಇದೀಗ ಬಹುತೇಕ ಬಗೆಹರಿದಿದೆ. ಜನರೇಟರ್ ಸಮಸ್ಯೆ ಪರಿಹಾರ ಕಾರ್ಯವೂ ನಡೆದಿದೆ. ಹೊಸ 4ಜಿ ಟವರ್ಗಳಿಗೆ ಸೋಲಾರ್ ವ್ಯವಸ್ಥೆ ಇರುವುದರಿಂದ ಸಮಸ್ಯೆ ಇಲ್ಲ ಎಂದರು.
ಸಾಲಿಗ್ರಾಮ ಮತ್ತು ಸಾಸ್ತಾನ ನೆಟ್ವರ್ಕ್ ಸಮಸ್ಯೆ, ಜಾತ್ರೆಗಳಲ್ಲಿ ಬಿಎಸ್ಎನ್ಎಲ್ ಬಗ್ಗೆ ಪ್ರಚಾರ ಪಡಿಸುವ ಕುರಿತ ಅಧಿಕಾರಿಗಳ ನಿರಾಸಕ್ತಿ, ಮಣಿಪಾಲದಂತಹ ಪ್ರಮುಖ ಪಟ್ಟಣದಲ್ಲಿಯೇ ನೆಟ್ವರ್ಕ್ ಸಮಸ್ಯೆಗಳಿರುವ ಬಗ್ಗೆ ಸಲಹಾ ಸಮಿತಿಯ ಸದಸ್ಯರು ಗಮನ ಸೆಳೆದರು. ಮಾಹೆ ಮುಖ್ಯಸ್ಥರಿಗೆ ಕೂಡಲೇ ಪತ್ರ ಬರೆದು ಮಣಿಪಾಲ ಆಸ್ಪತ್ರೆ ಹಾಗೂ ಎಂಐಟಿ ಸೇರಿದಂತೆ ಮೂರ್ನಾಲ್ಕು ಕಡೆಗಳಲ್ಲಿ ಟವರ್ ಅಳವಡಿಸುವಂತೆ ಸಂಸದ ಕೋಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಿಎಸ್ಎನ್ಎಲ್ನ ಜನರಲ್ ಮೆನೇಜರ್ ಹೇಮಂತ್ ಬೊರ್ಲೆ, ಡೆಪ್ಯುಟಿ ಜನರಲ್ ಮೆನೇಜರ್ಗಳಾದ ಗೀತಾ ಕುಮಾರಿ, ಕೃಷ್ಣ ಮೊಗೇರ, ಮಮತಾ ಎನ್. ಇತರರು ಉಪಸ್ಥಿತರಿದ್ದರು.
"
ಖಾಸಗಿ ನೆಟ್ವರ್ಕ್ಗಳಿಗೆ ಸ್ಪರ್ಧೆ ಕೊಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಸರಿಪರಿಸಲು ಯೋಜನೆ ರೂಪಿಸಲಾಗುವುದು. ಇಂಟರ್ನೆಟ್ ಸೇರಿದಂತೆ ವಿವಿಧ ಸೇವೆ ಹೆಚ್ಚಿಸುವುದು ನಮ್ಮ ಉದ್ದೇಶ. ಈ ವಿಚಾರವಾಗಿ ಮೇ 10ರೊಳಗೆ ಮತ್ತೊಂದು ಸಭೆ ನಡೆಸಲಾಗುವುದು.