ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕುತ್ಯಾರು ನವೀನ್ ಶೆಟ್ಟಿ, ಮಹಾವೀರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್, ಮಧುಕರ್ ಮುದ್ರಾಡಿ, ದಿವಾಕರ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಶಿವಕುಮಾರ್ ಅಂಬಲಪಾಡಿ ಇದ್ದರು.
Published on:
Copied
Follow Us
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ
* 'ಕೇಂದ್ರ ಸರ್ಕಾರದಿಂದ ಜನ ಕಲ್ಯಾಣದ 12 ವರ್ಷಗಳು' ಅಭಿಯಾನ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದು 12 ವರ್ಷವಾಗಿದ್ದು ಈ ಅವಧಿಯಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಅಭಿವೃದ್ಧಿ ಪರ್ವವೇ ಕಂಡುಬರುತ್ತಿವೆ. ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದನ್ನು ಕಾಣುತ್ತಿದ್ದೇವೆ. ಉತ್ತಮ ಆಡಳಿತ ನೀಡುವುದನ್ನೇ ಆಧಾರವಾಗಿಟ್ಟುಕೊಂಡು ಅಭಿವೃದ್ಧಿಯ ಕೊನೆಯ ಮೈಲಿಯವರೆಗೂ ಕೊಂಡೊಯ್ಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಒಟ್ಟಿನಲ್ಲಿ ಸಾರ್ವಜನಿಕ ಸೇವೆಯೇ ಬಿಜೆಪಿ ಮಂತ್ರವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ (ಜೂ.20) ಆಯೋಜಿಸಿದ್ದ ಸುದ್ದಿಗೋಷ್ಠಿ ಹಾಗೂ ಮಾಧ್ಯಮ ಸಂವಾದದಲ್ಲಿ ಮಾತನಾಡಿ, 'ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣದ 12 ವರ್ಷಗಳು' ಅಭಿಯಾನದ ನಿಮಿತ್ತ ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಕ್ರಮ ಹಾಗೂ ಕೇಂದ್ರ ಸರ್ಕಾರದ ಈವರೆಗಿನ ಸಾಧನೆಯ ಮಾಹಿತಿ ನೀಡಿದರು.
ಹಲವು ಜೋಜನೆಗಳು ಜಾರಿ
12 ವರ್ಷದಲ್ಲಿ ನೂರಾರು ಯೋಜನೆಗಳು ಜಾರಿಗೊಂಡಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಜನರಿಗೆ ಸೂರು ಒದಗಿಸಲಾಗಿದೆ. 81 ಕೋಟಿಗೂ ಅಧಿಕ ಜನರು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 74 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳಿಗೆ 17 ಸಾವಿರ ಕೋಟಿ ರೂ. ಸಾಲ ಒದಗಿಸಲಾಗಿದೆ. 2014ರಿಂದ ಆರಂಭಿಸಿ ಈವರೆಗೆ ಸುಮಾರು 25 ಕೋಟಿ ಜನರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಗೊಂಡಿದ್ದಾರೆ. ಮುದ್ರಾ ಯೋಜನೆಯಡಿ ಫಲಾನುಭವಿಗಳಿಗೆ 57 ಕೋಟಿಗೂ ಅಧಿಕ ಜನರಿಗೆ 50 ಸಾವಿರದಿಂದ 20 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ 15 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ
ಜನ್ ಧನ್ ಯೋಜನೆಯಡಿ 58 ಕೋಟಿಗೂ ಅಧಿಕ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮೂಲಕ ಶೇ.100 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಇವೆಲ್ಲವೂ ಸಹ ಪ್ರಮುಖವಾಗಿ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ. ಅರಣ್ಯದಿಂದ ಕಟ್ಟಿಗೆ ತಂದು, ಅದನ್ನು ಉರಿಸಿ ಹೊಗೆಯ ಮಧ್ಯದಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರ ಬವಣೆ ನೀಗಿಸಲು ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸೌಲಭ್ಯ ನೀಡಲಾಗುತ್ತಿದ್ದು ಸುಮಾರು 12 ಕೋಟಿ ಫಲಾನುಭವಿಗಳು ಈಗ ನಿರಾಳರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಪ್ರ.ಕಾರ್ಯದರ್ಶಿ ಶ್ರೀಕಾಂತ ನಾಯಕ್, ಜಿಲ್ಲಾ ವಕ್ತಾರರಾದ ಮಧುಕರ್ ಮುದ್ರಾಡಿ, ದಿವಾಕರ್ ಶೆಟ್ಟಿ, ಮಾಧ್ಯಮ ಪ್ರತಿನಿಧಿ ಶಶಾಂಕ್ ಶಿವತ್ತಾಯ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಇದ್ದರು.
ಯೋಜನೆ ಜಾರಿಗೊಳಿಸದ ರಾಜ್ಯ ಸರ್ಕಾರ
ದೇಶದ ಪ್ರತಿ ವ್ಯಕ್ತಿಗೂ 50 ಲೀಟರ್ ನೀರು ಲಭಿಸುವಂತಾಗಲು 72 ಸಾವಿರ ಕೋಟಿ ರೂ. ವೆಚ್ಚದ ಜಲಜೀವನ್ ಯೋಜನೆ ಜಾರಿಗೊಳಿಸಿದ್ದು ಕ್ರಾಂತಿಕಾರಿಯಾಗಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನಾ, ರೈತರಿಗೆ 6 ಸಾವಿರ ರೂ. ಧನ ಸಹಾಯ ನೀಡುವ ಕಿಸಾನ್ ಸಮ್ಮಾನ್ ಯೋಜನೆ ಸಾಧನೆಯಾಗಿದೆ. ದೇಶದ 81 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಗತ್ತಿದೆ. ರಾಜ್ಯಕ್ಕೆ 22 ಲಕ್ಷ ಕ್ವಿಂಟಾಲ್ ಅಕ್ಕಿ ನೀಡಲಾಗುತ್ತಿದೆ. ಅದನ್ನೇ ರಾಜ್ಯ ಸರ್ಕಾರ ತನ್ನದೆಂದು ಬಿಂಬಿಸುತ್ತಿದೆ. ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ. ಜನರ ಆರೋಗ್ಯಕ್ಕಾಗಿ ನೀಡಿದ ಆಯುಷ್ಮಾನ್ ಭಾರತ್ ಯೋಜನೆಯನ್ನೂ ಕಡೆಗಣಿಸುತ್ತಿದೆ. ರಾಹತ್ ಅಪಘಾತ ವಿಮೆಯಿಂದ 1.50 ಲಕ್ಷ ರೂ. ಚಿಕಿತ್ಸಾ ವೆಚ್ಚ ಲಭಿಸಲಿದೆ. ಇದನ್ನೂ ಜಾರಿಗೊಳಿಸುತ್ತಿಲ್ಲ. ಜನರಿಗೆ ಕಡಿಮೆ ದರದಲ್ಲಿ ಔಷಧ ಲಭಿಸುವಂತಾಗಲು ದೇಶದಲ್ಲಿ 16,900 ಜನೌಷಧ ಕೇಂದ್ರ ತೆರೆಯಲಾಗಿದ್ದು, ರಾಜ್ಯದಲ್ಲಿರುವ ಈ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚಿಸುತ್ತಿದೆ ಎಂದು ಕೋಟ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
"
ದೇಶದಲ್ಲಿ 2014ರ ವೇಳೆಯಲ್ಲಿ ನಿತ್ಯ ಕೇವಲ 4-5 ಕಿಮೀ ರಸ್ತೆ ಆಗುತ್ತಿತ್ತು. ಇದೀಗ ನಿತ್ಯ ಸುಮಾರು 22 ಕಿಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹಿಂದಿನ ಸರ್ಕಾರದಲ್ಲಿ ರೈಲ್ವೆ ವಿದ್ಯುದೀಕರಣ ಕೇವಲ ಶೇ.25 ಇತ್ತು. ಇದೀಗ ಶೇ.95 ಆಗಿದೆ. ವಂದೇ ಭಾರತ್ ರೈಲು, ಬುಲೆಟ್ ಟ್ರೈನ್ ನೀಡಲಾಗಿದ್ದು, ರೈಲ್ವೆ ಬಜೆಟ್ ಸಹ ಏರಿಕೆ ಮಾಡಲಾಗಿದೆ. ದೇಶ ವಿಶ್ವದಲ್ಲಿ ಈ ಹಿಂದೆ 15ನೇ ಸ್ಥಾನದಲ್ಲಿತ್ತು. ಕಳೆದ ವರ್ಷ 4ನೇ ಸ್ಥಾನ, 2027-28ರಲ್ಲಿ 3ನೇ ಸ್ಥಾನಕ್ಕೆ ಬರಲಿದೆ. 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಯಲ್ಲಿ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ನಂ. 1 ಸ್ಥಾನದಲ್ಲಿರಲಿದೆ.