ನವೆಂಬರ್​ನಲ್ಲಿ ನೀಡಿ ಪೈಪ್​ಲೈನ್​ ಗ್ಯಾಸ್​ ಸಂಪರ್ಕ

ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ರಾಹುಲ್​, ದುರ್ಗಾಪ್ರಸಾದ್​, ಸುಬ್ರಹ್ಮಣ್ಯ, ಪ್ರಿನ್ಸ್​ ಲಾರೆನ್ಸ್​, ಪ್ರಕಾಶ್​ ಇದ್ದರು.
ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ರಾಹುಲ್​, ದುರ್ಗಾಪ್ರಸಾದ್​, ಸುಬ್ರಹ್ಮಣ್ಯ, ಪ್ರಿನ್ಸ್​ ಲಾರೆನ್ಸ್​, ಪ್ರಕಾಶ್​ ಇದ್ದರು.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

* ಅದಾನಿ ಸಂಸ್ಥೆಯ ಅಧಿಕಾರಿಗಳಿಗೆ ತರಾಟೆ

* ವಿಳಂಬ ಧೋರಣೆಗೆ ಸಭೆಯಲ್ಲಿ ಆಕ್ರೋಶ

ಉಡುಪಿ: ಜಿಲ್ಲೆಯಲ್ಲಿ ಮನೆಮನೆಗೆ ಪೈಪ್​ಲೈನ್​ ಮೂಲಕ ಗ್ಯಾಸ್​ ವಿತರಣೆಯ ಯೋಜನೆ ಆರೇಳು ವರ್ಷದಿಂದ ನನೆಗುದಿಗೆ ಬಿದ್ದಿದೆ. ಪಣಂಬೂರಿನಿಂದ ಕರಾವಳಿ ಜಂಕ್ಷನ್​ ವರೆಗೆ 48 ಕಿಮೀ ಹಾಗೂ ಕರಾವಳಿ ಜಂಕ್ಷನ್​ನಿಂದ ಮಣಿಪಾಲದ ಕಾಯಿನ್​ ಸರ್ಕಲ್​ವರೆಗೆ ಪೈಪ್​ಲೈನ್​ ಸಂಪರ್ಕವೂ ಆಗಿದೆ. ಆದರೂ ಗ್ಯಾಸ್​ ಪೂರೈಕೆಗೆ ಏಕೆ ವಿಳಂಬ ಮಾಡುತ್ತಿದ್ದೀರಿ? ನವೆಂಬರ್​ ಮೊದಲ ವಾರದೊಳಗೆ ಮನೆಮನೆಗೆ ಗ್ಯಾಸ್​ ವಿತರಣೆ ಆರಂಭಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅದಾನಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುರುವಾರ (ಸೆ.27) ಸಭೆ ನಡೆಸಿ, ಈ ಹಿಂದಿನಿಂದ ಚರ್ಚಿಸಿದಂತೆ ಸುಮಾರು 25 ಸಾವಿರ ಕುಟುಂಬಗಳಿಗೆ ಗ್ಯಾಸ್​ ಸಂಪರ್ಕ ಕೊಡಲೇಬೇಕು. ಇನ್ನು ವಿಳಂಬ ಸಹಿಸಲಾಗದು ಎಂದು ತರಾಟೆಗೆ ತೆಗೆದುಕೊಂಡರು.

ಕಾಮಗಾರಿಗೆ ನಗರಸಭೆ ತಡೆ

ಅದಾನಿ ಕಂಪನಿಯ ಯೋಜನಾ ಅನುಷ್ಠಾನದ ಅಧಿಕಾರಿ ರಾಹುಲ್​ ಮಾತನಾಡಿ, ಸುಮಾರು 2 ಸಾವಿರ ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ಪೈಪ್​ಲೈನ್​ ಮೂಲಕ ಗ್ಯಾಸ್​ ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಒಟ್ಟು 300 ಕಿಮೀ ವ್ಯಾಪ್ತಿಯ ಪೈಪ್​ಲೈನ್​ ವಿಸ್ತರಣಾ ಜಾಲವು ಈ ಯೋಜನೆಯ ಗುರಿಯಾಗಿದೆ. ಈಗಾಗಲೇ 200 ಕಿಮೀವರೆಗೆ ಪೂಪ್​ಲೈನ್​ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನಗರಸಭಾ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ಅಕ್ಟೋಬರ್​ನಲ್ಲಿ ಮತ್ತೆ ಬಾಕಿ ಕಾಮಗಾರಿ ಆರಂಭಿಸಿ, ನವೆಂಬರ್​ ಪ್ರಥಮ ವಾರದಲ್ಲಿ ಮನೆಮನೆಗೆ ಗ್ಯಾಸ್​ ಸಂಪರ್ಕ ನೀಡುವುದಾಗಿ ತಿಳಿಸಿದರು.

ಡಿಸಿ ಸ್ವರೂಪಾ ಸೂಚನೆ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕೆ ವಿಳಂಬ ಸಲ್ಲದು. ಸಂಸದ ಪೂಜಾರಿ ಅವರ ಮಾರ್ಗದರ್ಶನದಂತೆ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ನವೆಂಬರ್​ ಪ್ರಥಮ ವಾರದಲ್ಲಿ ಗ್ಯಾಸ್​ ಸಂಪರ್ಕ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಸಭೆಯ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಗೇಲ್​ ಕಂಪನಿಯ ಡೆಪ್ಯೂಟಿ ಜನರಲ್​ ಮ್ಯಾನೇಜರ್​ ಪ್ರಿನ್ಸ್​ ಲಾರೆನ್ಸ್​, ಆಹಾರ ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್​ ಪ್ರಕಾಶ್​ ಉಪಸ್ಥಿತರಿದ್ದರು.
"

ಗೇಲ್​ ಸಂಸ್ಥೆಯು ಅನಿಲ ಸರಬರಾಜು ವ್ಯವಸ್ಥೆಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಅಲ್ಲದೆ, ಪಣಂಬೂರಿನಲ್ಲಿಯೂ ಗ್ಯಾಸ್​ ವಿತರಣಾ ವ್ಯವಸ್ಥೆಯ ಯೋಜನೆ ಪೂರ್ಣಗೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಬಳಕೆಯಿರುವ ಸಿಎನ್​ಜಿ ವಿತರಣಾ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಗ್ಯಾಸ್​ ಪೂರೈಸಬೇಕು. ಅಲ್ಲದೆ, ಅರ್ಜಿ ಹಾಕಿದ ಇತರ ವಿತರಣಾ ಸಂಸ್ಥೆಗಳಿಗೂ ಗ್ಯಾಸ್​ ಸಂಪರ್ಕ ನೀಡಬೇಕು.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net