ಗೃಹಬಳಕೆ ಅನಿಲ ವಿತರಣೆಯಲ್ಲಿ ಸಮಸ್ಯೆಯಾಗದಿರಲಿ

ಉಡುಪಿ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗ್ಯಾಸ್​ ಸಿಲಿಂಡರ್​ ಸಮಸ್ಯೆಯ ಕುರಿತ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ಅಬೀದ್​ ಗದ್ಯಾಳ, ಸುಧಾಕರ್​ ನಾಯಕ್​, ರವೀಂದ್ರ ಹಾಗೂ ಗ್ಯಾಸ್​, ಪಂಪ್​ಗಳ ಮಾಲೀಕರು, ವಿತರಕರು ಇದ್ದರು.
ಉಡುಪಿ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗ್ಯಾಸ್​ ಸಿಲಿಂಡರ್​ ಸಮಸ್ಯೆಯ ಕುರಿತ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ಅಬೀದ್​ ಗದ್ಯಾಳ, ಸುಧಾಕರ್​ ನಾಯಕ್​, ರವೀಂದ್ರ ಹಾಗೂ ಗ್ಯಾಸ್​, ಪಂಪ್​ಗಳ ಮಾಲೀಕರು, ವಿತರಕರು ಇದ್ದರು.
Published on

* ಕ್ರಮ ವಹಿಸಲು ಅಧಿಕಾರಿಗಳಿಗೆ ಸಂಸದ ಪೂಜಾರಿ ಸಲಹೆ 

* ಗ್ಯಾಸ್​ ಏಜೆನ್ಸಿ, ಪಂಪ್​ಗಳ ಮಾಲೀಕರೊಂದಿಗೆ ಸಭೆ

ಉಡುಪಿ: ಇತ್ತೀಚೆಗೆ ಗೃಹ ಬಳಕೆಯ ಗ್ಯಾಸ್​ ಸಿಲಿಂಡರ್​ ವಿತರಣೆಯಲ್ಲಿ ಅದರಲ್ಲೂ ಏಕ ಸಿಲಿಂಡರ್​ ಹೊಂದಿರುವವರಿಗೆ ವಿತರಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಜಿಲ್ಲೆಯ ಗೃಹ ಬಳಕೆಯ ಗ್ರಾಹಕರಿಗೆ ಎಲ್​ಪಿಜಿ ಸಿಲಿಂಡರ್​ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು  ಅಧಿಕಾರಿಗಳಿಗೆ ಹಾಗೂ ಗ್ಯಾಸ್​ ಏಜೆನ್ಸಿಗಳ ಮಾಲೀಕರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಮಾ.31) ಆಯೋಜಿಸಿದ್ದ ಗೃಹ ಹಾಗೂ ವಾಣಿಜ್ಯ ಬಳಕೆಯ ಅನಿಲ ವಿತರಣೆ ಕುರಿತ ಸಭೆಯಲ್ಲಿ ಮಾತನಾಡಿದರು.

ಅನಿಲ ಆಮದು ತೊಡಕು

ಈ ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯವಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಬಿಕ್ಕಟ್ಟಿನಿಂದಾಗಿ ಸಮರ್ಪಕವಾಗಿ ಅನಿಲ ಆಮದು ಆಗುತ್ತಿಲ್ಲ. ಹೀಗಾಗಿ ಸ್ವಲ್ಪ ತೊಂದರೆ ಆಗುತ್ತಿದೆ. ಆದರೂ ಸಹ ಗೃಹ ಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ ಆಗದಂತೆ ವಿತರಿಸಲು ಸರ್ಕಾರ ಬದ್ಧವಿದೆ. ವಾಣಿಜ್ಯ ಬಳಕೆಯ ಗ್ರಾಹಕರಿಗೆ ಶೇ. 20ರಷ್ಟು ಪೂರೈಕೆಗೆ ಕ್ರಮ ವಹಿಸುವುದಾಗಿ ಸರ್ಕಾರ ತಿಳಿಸಿದೆ. ವಿದ್ಯಾರ್ಥಿ ನಿಲಯ, ಆಸ್ಪತ್ರೆ, ಶಾಲೆ ಸೇರಿದಂತೆ ಅತಿ ಅಗತ್ಯವಿರುವ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ವಾಣಿಜ್ಯ ಸಿಲಿಂಡರ್​ ಪೂರೈಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಎಎಸ್ಪಿ ಸುಧಾಕರ್​ ನಾಯಕ್​, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ಯಾಸ್​ ಏಜನ್ಸಿ ಹಾಗೂ ಪಂಪ್​ಗಳ ಮಾಲೀಕರು, ವಿತರಕರು ಉಪಸ್ಥಿತರಿದ್ದರು.

ಹೆಚ್ಚು ಹಣ ಪಡೆದರೆ ನಿರ್ದಾಕ್ಷಿಣ್ಯ ಕ್ರಮ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ವಾಹನಕ್ಕೆ ಬಳಸುವ ಎಲ್​ಪಿಜಿ ಹಾಗೂ ಸಿಎನ್​ಜಿ ಅನಿಲಗಳನ್ನು ಆಯಿಲ್​ ಕಾರ್ಪೋರೇಷನ್​ ಸಂಸ್ಥೆ ನಿಗದಿಪಡಿಸಿದ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ನಿಗದಿತ ದರ ಹಾಗೂ ದಾಸ್ತಾನು ಮಾಹಿತಿಯನ್ನು ಕಾಣುವಂತೆ ಪ್ರದರ್ಶಿಸಬೇಕು. ಹೆಚ್ಚಿನ ಹಣ ಪಡೆದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗೃಹ ಬಳಕೆ ಸಿಲಿಂಡರ್​ ಇತರ ಉದ್ದೇಶಕ್ಕೆ ಬಳಸಿದರೂ ಸಹ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದೇ ಸಿಲಿಂಡರ್​ ಇರುವ ಗ್ರಾಹಕರು 25 ದಿನಗಳ ನಂತರ ಹಾಗೂ ಎರಡು ಸಿಲಿಂಡರ್​ ಇರುವವರು 35 ದಿನದ ಬಳಿಕವೇ ಬುಕಿಂಗ್​ ಮಾಡಬೇಕು ಎಂದು ಸೂಚಿಸಿದರು.
"

ಜಿಲ್ಲೆಯಲ್ಲಿ ಪೆಟ್ರೋಲ್​, ಡಿಸೇಲ್​ನಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಅನಧಿಕೃತವಾಗಿ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಮಣಿಪಾಲ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ನೋಂದಣಿ ಮಾಡಿಕೊಂಡ ಸಂಸ್ಥೆಗಳಿಂದ ವಾಣಿಜ್ಯ ಸಿಲಿಂಡರ್​ ವಿತರಣೆಯಾಗದೆ ತೊಂದರೆ ಉಂಟಾಗುತ್ತಿದೆ. ನೋಂದಾವಣಿಯನ್ನೇ ಇತರ ಸಂಸ್ಥೆಗಳಿಗೆ ವರ್ಗಾಯಿಸಲು ಅನಿಲ ಕಂಪನಿಗಳೊಂದಿಗೆ ಚರ್ಚಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net