

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ರಸ್ತೆಯ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಡಚಣೆಯುಂಟಾಗುತ್ತಿದ್ದು, ಗಿಡಗಂಟಿಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಗಂಗೊಳ್ಳಿ ತ್ರಾಸಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ಈ ರಸ್ತೆಯಲ್ಲಿ ಎರಡು ವಾಹನ ಸಾಗುವಷ್ಟು ಜಾಗವಿದ್ದು, ಪಾದಚಾರಿಗಳು ನಡೆದಾಡಲು ಜಾಗವಿಲ್ಲದೆ ರಸ್ತೆಯ ಮೇಲೆ ನಡೆದುಕೊಂಡು ಹೋಗಬೇಕಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ಹಲವು ಕಡೆಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದ್ದು ಪಾದಚಾರಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.
ನಾಯಕವಾಡಿಯಿಂದ ಕೊಡಪಾಡಿವರೆಗೆ ಗಿಡಗಂಟಿಗಳು ರಸ್ತೆಗೆ ಬಾಗಿಕೊಂಡಿವೆ. ರಸ್ತೆಗೆ ತಾಗಿಕೊಂಡು ಚರಂಡಿ ಇದ್ದು, ರಾತ್ರಿ ವೇಳೆ ಈ ವಾರ್ಗದಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಎಚ್ಚರ ತಪ್ಪಿದರೆ ಅನಾಹುತ ನಡೆಯುವುದು ನಿಶ್ಚಿತ. ರಸ್ತೆ ಬದಿಯ ಗಿಡಗಂಟಿಗಳಲ್ಲಿ ಹಾವು ಮತ್ತು ಇನ್ನಿತರ ವಿಷಜಂತುಗಳು ಸಂಚರಿಸುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನರು ಭಯದಲ್ಲಿ ಸಂಚರಿಸಬೇಕಾಗಿದೆ.
ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನೂರಾರು ಲಾರಿ ಮತ್ತಿತರ ವಾಹನಗಳು ಸಂಚರಿಸುತ್ತಿದ್ದು, ನೂರಾರು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕ ಸಮೀಪದ ಶಾಲಾ-ಕಾಲೇಜಿಗೆ ತೆರಳುತ್ತಿದ್ದಾರೆ. ಪ್ರತಿನಿತ್ಯ ಗಂಗೊಳ್ಳಿ ಬಂದರಿಗೆ ತೆರಳುವ ಮೀನುಗಾರರು ಇದೇ ರಸ್ತೆಯನ್ನು ಅವಲಂಬಿಸಿದ್ದು ಸದ್ಯದ ಪರಿಸ್ಥಿತಿಯಲ್ಲಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಈ ರಸ್ತೆ ಮೂಲಕ ಸಂಚರಿಸುವುದು ಬಹಳಷ್ಟು ಅಪಾಯಕಾರಿಯಾಗಿದೆ.
ರಸ್ತೆ ಬದಿಯಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆಗೆ ಮನವಿ ವಾಡಿಕೊಳ್ಳಲಾಗಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅನುಕೂಲ ವಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.