ಉಡುಪಿಯಲ್ಲಿ ತಾಯಿ, ಮೂರು ವರ್ಷದ ಪುತ್ರ ನಾಪತ್ತೆ

ಉಡುಪಿಯ ಹಳೆಯ ಬಸ್​ ನಿಲ್ದಾಣದ ಬಳಿ ನಾಪತ್ತೆಯಾದ ಕಾವ್ಯಾ ಹಾಗೂ ಆಕೆಯ ಪುತ್ರ.
ಉಡುಪಿಯ ಹಳೆಯ ಬಸ್​ ನಿಲ್ದಾಣದ ಬಳಿ ನಾಪತ್ತೆಯಾದ ಕಾವ್ಯಾ ಹಾಗೂ ಆಕೆಯ ಪುತ್ರ.
Published on: 

* ನಾಸಿಕ್​ನಿಂದ ಸಂಬಂಧಿಕರೊಂದಿಗೆ ಬಂದಿದ್ದ ಮಹಿಳೆ

ಉಡುಪಿ: ನಗರದ ಹಳೆಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಸಮೀಪದಲ್ಲಿ ಮೂಲತ; ನಾಸಿಕ್​ದವರಾದ ಕಾವ್ಯಾ (29) ಎಂಬವರು ಪುತ್ರ ಶಿವಾಂಶ (3)ನೊಂದಿಗೆ ನಾಪತ್ತೆಯಾದ ಟನೆ ನಡೆದಿದೆ.

ಪೊಲೀಸ್​ ಪ್ರಕಟಣೆ ಪ್ರಕಾರ, ಕಾವ್ಯಾ ಮತ್ತು ಅವರ ಮಗನನ್ನು ಮೆಣಸೆಯಲ್ಲಿರುವ ಅವರ ಪತಿ ಯತೀಶ್ವರ ಅವರ ಮನೆಗೆ ಬಿಡಲು ಸಂಬಂಧಿಕರು ನಾಸಿಕ್​ನಿಂದ ಬಂದಿದ್ದರು. ಅ.23ರಂದು ಬೆಳಗ್ಗೆ ಉಡುಪಿಗೆ ಕರೆತಂದಿದ್ದರು. ಬೆಳಗ್ಗೆ 8:30ರ ವೇಳೆಯಲ್ಲಿ ಉಡುಪಿಗೆ ತಲುಪಿದ ಬಳಿಕ ಆಟೋದಲ್ಲಿ ಹಳೆಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಬಂದು ಲಗೇಜ್​ ಇಳಿಸಿ ನಿಂತಿದ್ದರು.

ಈ ವೇಳೆ ಕಾವ್ಯಾ ತನಗೆ ತಿಂಡಿ ಅಥವಾ ಚಹಾ ಏನೂ ಬೇಡ. ನಾನಿಲ್ಲಿಯೇ ಇರುತ್ತೇನೆ. ನೀವು ತಿಂಡಿ ಸೇವಿಸಿ ಬರುವಂತೆ ಜೊತೆಯಲ್ಲಿದ್ದವರಿಗೆ ತಿಳಿಸಿದ್ದಳು ಎನ್ನಲಾಗಿದೆ. ಅದರಂತೆ ಸಂಬಂಧಿಕರು ಹೋಟೆಲ್​ಗೆ ತೆರಳಿ ತಿಂಡಿ ತಿಂದು 9:15ಕ್ಕೆ ವಾಪಸ್​ ಬಂದಾಗ ಕಾವ್ಯಾ ಮತ್ತು ಅವಳ ಪುತ್ರ ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಟ ನಡೆಸಿ, ಎಲ್ಲಿಯೂ ಪತ್ತೆಯಾಗದ್ದರಿಂದ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ಮಹಿಳೆ ಮತ್ತು ಆಕೆಯ ಪುತ್ರನ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಾಪತ್ತೆಯಾಗಿರುವ ಕಾವ್ಯಾ ಅವರು ಸುಮಾರು 4 ಅಡಿ 10 ಇಂಚು ಎತ್ತರವಿದ್ದು, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ನಾಪತ್ತೆಯಾಗುವ ವೇಳೆ ಅವಳು ಹಳದಿ ಬಣ್ಣದ ಹೂಗಳಿರುವ ಟಾಪ್​ ಮತ್ತು ನೀಲಿ ಬಣ್ಣದ ಜೀನ್ಸ್​ ಪ್ಯಾಂಟ್​ ಧರಿಸಿದ್ದರು. ಕನ್ನಡ, ಹಿಂದಿ, ತುಳು ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.

ತಾಯಿ ಹಾಗೂ ಮಗನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್​ ಠಾಣೆ 0820-2520444, ಉಡುಪಿ ಕಂಟ್ರೋಲ್ ರೂಂ 0820-2526444, ಪೊಲೀಸ್ ನಿರೀಕ್ಷಕರು 9480805408 ಅಥವಾ ಪೊಲೀಸ್ ಉಪನಿರೀಕ್ಷಕರು 9080805445 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net