‘ತಾಯಿ-ಮಗು’ ಕಾಲಕೃತಿಗೆ ಮರುಜೀವ

 ಕಾಸರಗೋಡು ಜಿಲ್ಲಾ ಪಂಚಾಯಿತಿ ಕಚೇರಿ ವಠಾರದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಕ್ರೀಟ್ ಶಿಲ್ಪಗಳು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಕಚೇರಿ ವಠಾರದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಕ್ರೀಟ್ ಶಿಲ್ಪಗಳು.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ಕಾಸರಗೋಡು ಜಿಲ್ಲೆಯನ್ನೇ ತಲ್ಲಣಗೊಳಿಸಿರುವ ಎಂಡೋಸಲ್ಫಾನ್ ದುಷ್ಪರಿಣಾಕ್ಕೆ ಒಳಗಾದ ಸಂತ್ರಸ್ತರ ಸ್ಮರಣಾರ್ಥ ಕಾಸರಗೋಡು ಜಿಲ್ಲಾ ಪಂಚಾಯಿತಿ ಕೇಂದ್ರ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತ ‘ತಾಯಿ ಮತ್ತು ಮಗು’ವಿನ ಕಾಂಕ್ರೀಟ್ ಶಿಲ್ಪಕಲಾಕೃತಿಯು ಅಂತಿಮ ಹಂತದಲ್ಲಿದೆ.
ಶಿಲ್ಪಿ ಕಾನಾಯಿ ಕುಞಿರಾಮನ್ ಅವರ ಕನಸಿನ ಕೂಸಾದ ಈ ಶಿಲ್ಪಕ್ಕೆ ಎರಡು ದಶಕಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಚಾಲನೆ ನೀಡಿದ್ದರೂ ಬಳಿಕ ಕಾಮಗಾರಿ ಕುಂಟುತ್ತಾ ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಕಾನಾಯಿ ಕುಞಿರಾಮನ್ ಶಿಲ್ಪ ರಚನೆಯ ಮುತುವರ್ಜಿ ವಹಿಸಿಕೊಂಡಿದ್ದಾರೆ.

40 ಅಡಿ ಎತ್ತರದ ಶಿಲ್ಪ

ವರ್ಷದ ಹಿಂದೆ ಬಿದ್ದು ಗಾಯಗೊಂಡಿದ್ದ ಕುಞಿರಾಮನ್ ಅವರು ಸುದೀರ್ಘ ಚಿಕಿತ್ಸೆಯ ಬಳಿಕ ತಮ್ಮ ಪತ್ನಿ ನಳಿನಿ ಅವರ ಬೆಂಬಲದ ಜತೆಗೆ 40 ಅಡಿ ಎತ್ತರದ ಕಾಂಕ್ರೀಟ್ ಶಿಲ್ಪದ ಅಂತಿಮ ಹಂತದ ಕಾಮಗಾರಿಯ ಪ್ರತಿಯೊಂದು ಸೂಕ್ಷ್ಮ ಕೆಲಸವನ್ನೂ ಖುದ್ದು ಪರಿಶೀಲಿಸುತ್ತಿದ್ದಾರೆ. ಅಂತಿಮ ಹಂತದ ಕಾಮಗಾರಿಯಲ್ಲಿ ತಮಿಳುನಾಡಿನ ಮಾತಾರ್ಂಡಮ್‌ನ ನುರಿತ ಕೆಲಸಗಾರರು ತೊಡಗಿಸಿಕೊಂಡಿದ್ದಾರೆ.
ವಿವಿಧ ಕಾರಣಗಳಿಂದ ಶಿಲ್ಪದ ನಿರ್ಮಾಣ ಕೆಲ ಕಾಲ ಸ್ಥಗಿತಗೊಂಡಿದ್ದರೂ, ಪ್ರಸ್ತುತ ಆಡಳಿತ ಸಮಿತಿ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿ ಶೀಘ್ರವೇ ಲೋಕಾರ್ಪಣೆಗೊಳಿಸಲು ನಿರ್ಧರಿಸಿದೆ. ಕಾಮಗಾರಿಗಳು ಬೇಗನೆ ಪೂರ್ಣಗೊಂಡರೆ ಮುಂದಿನ ತಿಂಗಳೇ ಉದ್ಘಾಟಿಸುವ ಗುರಿ ಇದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದ್ದಾರೆ.


ನೋವಿನ ಸಂಕೇತ

ಕೈ ಮುಷ್ಟಿ ಹಿಡಿದು ಸಹಾಯ ಯಾಚಿಸುತ್ತಿರುವ ಸಂತ್ರಸ್ತ ತಾಯಿ ಹಾಗೂ ತಾಯಿ ಪಕ್ಕದಲ್ಲೇ ಅಳುತ್ತಿರುವ ಮಗುವಿನ ಚಿತ್ರವನ್ನು ಕಾಂಕ್ರೀಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ತರ ಬದುಕು ಮತ್ತು ನೋವಿನ ಸಂಕೇತವಾಗಿ ಜಿಲ್ಲಾ ಪಂಚಾಯಿತಿ ನಿರ್ಮಿಸುತ್ತಿರುವ ಈ ಐತಿಹಾಸಿಕ ಸ್ಮಾರಕವು ಹದಿನೆಂಟು ವರ್ಷಗಳ ಕಾಯುವಿಕೆಯ ನಂತರ ಪೂರ್ಣಗೊಳ್ಳುವ ಹಂತಕ್ಕೆ ತಲುಪುತ್ತಿದೆ.

ಕಾಸರಗೋಡಿನ ಎಂಡೋಸಲ್ಪಾನ್ ಸಂತ್ರಸ್ತ ತಾಯಂದಿರ ರೋದನವನ್ನು ಈ ಶಿಲ್ಪ ಪ್ರತಿಬಿಂಬಿಸುತ್ತಿದೆ. ಕಾಸರಗೋಡಿನ ಸಾಂಸ್ಕೃತಿಕ ನಕ್ಷೆಯಲ್ಲಿ ಪ್ರಮುಖ ಹೆಗ್ಗುರುತಾಗಲಿರುವ ಈ ಶಿಲ್ಪದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net