ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಯಿಂದ ಭಾರತೀಯ ಆಚರಣೆ ಸಂಸ್ಕೃತಿಗಳು ಮೂಲೆಗುಂಪಾಗುತ್ತಿರುವ ಮಧ್ಯೆ ಎಸ್‌ಡಿಎಂನ ರತ್ನವಾನಸ ವಿದ್ಯಾರ್ಥಿನಿಲಯ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡುವ ಜತೆಗೆ ದೇಶೀಯ ಚಿಂತನೆ ಮತ್ತು ಸುಸಂಸ್ಕೃತ ಜೀವನ ಶೈಲಿ ಕಲಿಸುತ್ತಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮಹಾವೀರ್ ಜೈನ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರತ್ನವಾನಸ ವಿದ್ಯಾರ್ಥಿನಿಲಯದಲ್ಲಿ ನಡೆದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಸವಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಧರ್ವಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರ ದೃಷ್ಟಿತ್ವದಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಇಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿವೆ. 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 8 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಠ್ಯಶಿಕ್ಷಣ ಜತೆಗೆ ಪ್ರಾಯೋಗಿಕ ಅನುಭವಗಳ ಮೂಲಕ ಜೀವನ ಶಿಕ್ಷಣ ಕಲಿಸಿಕೊಡುತ್ತಿರುವ ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯಕ್ಕೆ ಹಲವು ಜಿಲ್ಲೆಗಳಿಂದ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಉಜಿರೆ ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ವಿದ್ಯಾಕಿರಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಉತ್ಸಾಹದೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಪಾಲಕರ ಭರವಸೆ ಹಾಗೂ ಕನಸನ್ನು ನನಸಾಗುವತ್ತ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಸತತವಾಗಿ ಪರಿಶ್ರಮಿಸಬೇಕು ಎಂದರು.
ನಿಲಯದ ಮುಖ್ಯ ಮೇಲ್ವಿಚಾರಕ ಯತೀಶ್ ಬಳಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಲಯವು ವಿದ್ಯಾರ್ಥಿಗಳಿಗೆ ಜೀವನ ಕಲೆಯ ಶಿಕ್ಷಣ ಕಲಿಸಿಕೊಡುವ ಜತೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲೂ ಅನೇಕ ವರ್ಷಗಳಿಂದ ನೂರು ಶೇಕಡ ಲಿತಾಂಶ ಪಡೆಯುತ್ತಾ ಬಂದಿದೆ ಎಂದರು.
ನಿಲಯದ ಹಳೇ ವಿದ್ಯಾರ್ಥಿ ಡಾ.ವೆಂಕಟೇಶ್ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಅರವಿಂದ, ನಿಲಯ ಪಾಲಕರಾದ ರವಿಚಂದ್ರ, ಉದಯರಾಜ್, ದೀಪಕ್, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ರಾಕೇಶ್ ಡಿ.ಆರ್. ಮತ್ತು ಜ್ಞಾನೇಶ್ ಪ್ರಾರ್ಥಿಸಿದರು. ಕೌತುಕ್ ವಂದಿಸಿದರು. ಸಮ್ಯಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಆರತಿ ಬೆಳಗಿ ಸ್ವಾಗತ
ಸಭಾ ಕಾರ್ಯಕ್ರಮದ ಆರಂಭಕ್ಕೂ ಮೊದಲು ನಿಲಯದ ವಿದ್ಯಾರ್ಥಿಗಳು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಅವರ ಪಾಲಕರ ಜತೆಯಾಗಿ ಆರತಿ ಬೆಳಗಿ ಸ್ವಾಗತಿಸಿದರು. ಶಂಖ ಹಾಗೂ ಜಾಗಟೆ ನಾದದೊಂದಿಗೆ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.