

ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದು ನಿಂತಿದೆ. ಸಂಘಟನೆ ಮತ್ತು ಸಮುದಾಯದ ಹಿತದೃಷ್ಟಿಯಿಂದ ಬೈಂದೂರು ಭಾಗದಲ್ಲಿ ಯುವ ಸಂಘಟನೆ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವೆ ನೀಡುತ್ತಿದೆ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ ಎಸ್.ಕೊರವಡಿ ಹೇಳಿದರು.
ಯಡ್ತರೆ ಬಂಟರ ಭವನದಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಹೆಲ್ತ್‌ಕೇರ್ ಮಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಘಟಕ ಅಧ್ಯಕ್ಷ ಹರೀಶ ಎಂ.ಮಯ್ಯಡಿ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿರ್ದೇಶಕ ರಾಮ ಮೊಗವೀರ ಕಳವಾಡಿ, ಮೊಗವೀರ ಯುವ ಸಂಘಟನೆ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಮ್, ಬೈಂದೂರು ಕರ್ನಾಟಕ ಕಂಪ್ಯೂಟರ್ ಎಜುಕೇಶನ್‌ನ ದಿನೇಶ ಎಂ.ಕುಂದರ್, ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಕೃಷ್ಣ ಅಳ್ವೆಗದ್ದೆ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರಾಜ ಕೆ.ಪಡುವರಿ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿದರು.
ಬಾಲಪ್ರತಿಭೆ ದೀಪಾ ದಿನೇಶ ಕುಂದರ್, ಮಿಸ್ಟರ್ ಕರ್ನಾಟಕ ಐಕಾನ್ ಪ್ರಶಸ್ತಿ ಪುರಸ್ಕೃತ ಮನೋಜ್ ಕುಮಾರ್ ಹಾಗೂ ಅಂತರ್ ರಾಜ್ಯಮಟ್ಟದ ಕರಾಟೆ ವಿಜೇತ ದಿಶಾನ್ ಉಮೇಶ ಮೊಗವೀರ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಸಾಧನೆಗೈದ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.