ಮಕ್ಕಳಿಗಾಗಿ 'ಮೊಬೈಲ್​ ವರ್ಜನ ಶಿಬಿರ' ಮೇ 14ರಿಂದ

ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ, ಉಡುಪಿ
ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ, ಉಡುಪಿ
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ

* ಪುತ್ತಿಗೆ ಮೂಲ ಮಠದಲ್ಲಿ 5 ದಿನ ಕ್ಯಾಂಪ್​

ಉಡುಪಿ: ಚಿಕ್ಕ ಮಕ್ಕಳು ಹಾಗೂ ಶಾಲಾ-ಕಾಲೇಜ್​ಗಳ ಅನೇಕ ವಿದ್ಯಾರ್ಥಿಗಳಲ್ಲಿ ಮೊಬೈಲ್​ ಗೀಳು ಹೆಚ್ಚುತ್ತಿದೆ. ಮೊಬೈಲ್​ ದುಶ್ಚಟದಿಂದ ಅವರಲ್ಲಿ ಬುದ್ಧಿಯಲ್ಲಿ ದುಷ್ಪರಿಣಾಮ ಹಾಗೂ ವಿವಿಧೆಡೆ ದುರಂತ ಆಗುತ್ತಿರುವುದನ್ನು ನಿತ್ಯ ಕೇಳುತ್ತಿದ್ದೇವೆ. ಹೀಗಾಗಿ ಮದ್ಯವರ್ಜನ ಶಿಬಿರದಂತೆಯೇ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್​ ಗೀಳು ತಪ್ಪಿಸಲು ಪುತ್ತಿಗೆ ಮೂಲ ಮಠದಲ್ಲಿ ಮೇ 14ರಿಂದ 18ರ ವರೆಗೆ 'ಮೊಬೈಲ್​ ವರ್ಜನ ಶಿಬಿರ' ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿಯ ಗೀತಾಮಂದಿರದಲ್ಲಿ ಶನಿವಾರ (ಏ.18) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಬೈಲ್​ನಿಂದ ಎಷ್ಟು ಒಳ್ಳೆಯದಾಗುತ್ತಿದೆಯೋ ಅಷ್ಟೇ ಕೆಟ್ಟದ್ದೂ ಆಗುತ್ತಿದೆ. ಯಾವುದೇ ಸಕಾರಾತ್ಮಕ ಚಟುವಟಿಕೆ, ಆಟೋಟಗಳಲ್ಲಿ ಮಕ್ಕಳು ಪಾಲ್ಗೊಳ್ಳದೆ ಮನೆಯಲ್ಲಿ ನಿತ್ಯವೂ ಮೊಬೈಲ್​ ಹಿಡಿದು ಮೂಲೆ ಸೇರುತ್ತಿದ್ದಾರೆ. ಅದರಿಂದ ಅವರ ಬೌದ್ಧಿಕ ಮಟ್ಟವೂ ಸಹ ಕುಸಿಯುತ್ತಿದೆ. ಅಪರಾಧ ಕೃತ್ಯಗಳ ಮನಸ್ಥಿತಿ ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೊಬೈಲ್​ ವ್ಯಸನಿಗಳು

ಮನೆಯವರು ಎಷ್ಟೇ ಹೇಳಿದರೂ ಕುಡಿತದ ಚಟ ಬಿಡದ ಮದ್ಯ ವ್ಯಸನಿಗಳಂತೆ ಅನೇಕ ಕುಟುಂಬಗಳ ಮಕ್ಕಳು ಮೊಬೈಲ್​ ವ್ಯಸನಿಗಳಾಗಿದ್ದಾರೆ. ಕುಡಿಯಲು ಹಣ ನೀಡದ ತಂದೆ-ತಾಯಿ, ಹೆಂಡತಿಯನ್ನು ಹೊಡೆಯುವ ರೀತಿಯಲ್ಲಿ ಮೊಬೈಲ್​ ಕೊಡದ ಪಾಲಕರನ್ನೂ ಮಕ್ಕಳೇ ಥಳಿಸುತ್ತಿರುವ ಟನೆ ನಡೆಯುತ್ತಿದೆ. ಒಂದೆರಡು ಕಡೆಗಳಲ್ಲಿ ಹೆತ್ತವರನ್ನೇ ಕೊಲೆ ಮಾಡಿದ ಘಟನೆಯೂ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಬೇಸಿಗೆ ರಜಾ ದಿನಗಳಲ್ಲಿ ಅವರನ್ನು ಮೊಬೈಲ್​ ಮುಕ್ತರನ್ನಾಗಿಸಲು ಹಾಗೂ ಮೊಬೈಲ್​ ವ್ಯಸನದಿಂದ ಅವರು ಹೊರಬರುವಂತಾಗಲು ಈ ಶಿಬಿರ ಸಹಕಾರಿಯಾಗಲಿದೆ ಎಂದರು.
ಮೊಬೈಲ್​ ಚಟ, ದುರ್ವ್ಯಸನಕ್ಕೆ ಒಳಗಾದ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಲು ಆಸಕ್ತಿ ಇರುವ ಚಿಂತಾಕ್ರಾಂತ ಪಾಲಕರು ಮೇ 10ರೊಳಗೆ ಗೀತಾ ಮಂದಿರದಲ್ಲಿ ಕೆ. ರಮಣ ಆಚಾರ್ಯ ಹಾಗೂ ಉಮಾಪ್ರಸಾದ್​ ಅವರಿಗೆ ಅರ್ಜಿ ಸಲ್ಲಿಸಬೇಕು. ಮನೋವೈದ್ಯರು, ಕಲಾವಿದರು ಮಕ್ಕಳಿಗೆ ಮನಸ್ಸು ನಿಗ್ರಹಿಸುವ ಚಟುವಟಿಕೆ ನಡೆಸಲಿದ್ದಾರೆ. ಇದೊಂದು ಪ್ರಾಯೋಗಿಕ ಶಿಬಿರವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಚಿಂತನೆಯೂ ಇದೆ ಎಂದು ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇದ್ದರು.

ಶ್ರೀಪುತ್ತಿಗೆ ಸುಗುಣ ಶಿಬಿರ ಉದ್ಘಾಟನೆ ಏ.19ರಂದು

ಸುಗುಣೇಂದ್ರ ಶ್ರೀ ಹಾಗೂ ಪಟ್ಟದ ಶಿಷ್ಯ ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ಉಡುಪಿಯ ಗೀತಾಮಂದಿರದಲ್ಲಿ ಏ.20ರಿಂದ ಏ.30ರ ವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 5:30ರ ವರೆಗೆ ಪ್ರಥಮ ಬಾರಿಗೆ 'ಶ್ರೀಪುತ್ತಿಗೆ ಸುಗುಣ ಶಿಬಿರ' ಆಯೋಜಿಸಲಾಗಿದೆ. ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣಾರ್ಥ ಶಿಬಿರ ಆಯೋಜಿಸಿದ್ದು, ಏ.19ರಂದು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶಪಾಲ್​ ಸುವರ್ಣ, ಖ್ಯಾತ ಚಿತ್ರನಟ, ನಿರ್ದೇಶಕ ರಿಷಭ್​ ಶೆಟ್ಟಿ, ಕಾಪು ಹೊಸ ಮಾರಿಗುಡಿಯ ವಾಸುದೇವ ಶೆಟ್ಟಿ, ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ.ಶ್ರೀನಿವಾಸ ರಾವ್​ ಪಾಲ್ಗೊಳ್ಳಲಿದ್ದಾರೆ. ಏ.30ರಂದು ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net