ತಾತ್ಕಾಲಿಕವಲ್ಲ, ಅಂತಿಮ ಏಕನಿವೇಶನ ನೀಡಿ

ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಶ್​ಪಾಲ್​ ಸುವರ್ಣ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಧಿಕಾರಿಗಳಿದ್ದರು.
ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಶ್​ಪಾಲ್​ ಸುವರ್ಣ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಧಿಕಾರಿಗಳಿದ್ದರು.
Published on

* ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕ ಯಶ್​ಪಾಲ್​ ಸೂಚನೆ

* ಉಡುಪಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ

ಉಡುಪಿ: ಮನೆ ನಿಮಾರ್ಣದ ಏಕ ವಿನ್ಯಾಸ ಅನುಮೋದನೆ ಸಮಯದಲ್ಲಿ ಇತ್ತೀಚೆಗೆ ತಾತ್ಕಾಲಿಕ ಅನುಮೋದನೆ ಮತ್ತು ಅಂತಿಮ ಅನುಮೋದನೆ ಎಂಬ ಎರಡು ಹಂತ ಅಳವಡಿಸಲಾಗಿದೆ. ಅದರಿಂದ ಅರ್ಜಿದಾರರಿಗೆ ಅನಗತ್ಯ ವಿಳಂಬ ಮತ್ತು ತೊಂದರೆಯಾಗುತ್ತಿದೆ. ಹೀಗಾಗಿ ನಗರಾಭಿವೃದ್ಧಿ ಪ್ರಾಧಿಕಾರವು ತಾತ್ಕಾಲಿಕ ಏಕನಿವೇಶನದ ಬದಲು ಅಂತಿಮ ಏಕನಿವೇಶನ ಒದಗಿಸಲು ಕ್ರಮ ವಹಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರಕ್ಕೆ ಸಂಬಂಧಿತ ಕಡತಗಳ ಬಗ್ಗೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಂಗಳವಾರ (ಮೇ 19) ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಮರು ನಿರ್ಮಾಣ ಕಷ್ಟ

ರಸ್ತೆ ಅಗಲೀಕರಣವಿದ್ದಲ್ಲಿ ಈ ಹಿಂದಿನಂತೆಯೇ ಸ್ಥಳಿಯ ಸಂಸ್ಥೆಗಳಿಗೆ ಶರತ್ತು ವಿಧಿಸಿ ಅಂತಿಮ ಅನುಮೋದನೆ ನೀಡುವುದೇ ಸೂಕ್ತ. ಅಗಲೀಕರಣದ ಜಾಗವು ಸರ್ಕಾರಕ್ಕೆ ಹಸ್ತಾಂತರ ಆಗಿರುವುದನ್ನು ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನಿಗದಿತ ವರದಿ ಪಡೆದು ಖಾತ್ರಿ ಮಾಡಿಕೊಳ್ಳಬಹುದು. ದಶಕದ ಹಿಂದೆ ನಿರ್ಮಿಸಿದ ಸರ್ಕಾರಿ ಬಡಾವಣೆಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಹಕ್ಕುಪತ್ರ ಪಡೆದವರಿಗೆ ಮನೆ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಅಗಲೀಕರಣಕ್ಕೆ ಸೂಚಿಸುತ್ತಿದ್ದಾರೆ. ಅದರಿಂದ ಕನಿಷ್ಠ 3ರಿಂದ 5 ಸೆಂಟ್ಸ್​ ಜಾಗ ಪಡೆದ ಅರ್ಜಿದಾರರಿಗೆ ಮನೆ ಮರು ನಿರ್ಮಾಣ ಕಷ್ಟಕರ ಎಂದರು. 
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್​ ಆರ್​., ಅಧಿಕಾರಿಗಳಾದ ಸಚಿನ್​, ಸತ್ಯ, ನಗರಸಭಾ ಸದಸ್ಯರು, ಇಂಜಿನಿಯರ್ಸ್​ಗಳು, ಬಿಲ್ಡರ್ಸ್​ ಅಸೋಸಿಯೇಷನ್​ನ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಶೀಘ್ರದಲ್ಲೇ ಮಾಸ್ಟರ್​ ಪ್ಲ್ಯಾನ್ ರಚನೆ

ಉಡುಪಿಯಲ್ಲಿ 2008ರ ಬಳಿಕ ನಗರದ ಸಮಗ್ರ ಮಾಸ್ಟರ್​ ಪ್ಲ್ಯಾನ್​ ತಯಾರಿಸದ್ದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಇಲಾಖಾ ಅಧಿಕಾರಿಗಳು, ಇಂಜಿನಿಯರ್ಸ್​ ಅಸೋಸಿಯೇಷನ್​, ಬಿಲ್ಡರ್ಸ್​ ಅಸೋಸಿಯೇಷನ್​ ಹಾಗೂ ವಿವಿಧ ತಜ್ಞರೊಂದಿಗೆ ಸಭೆ ನಡೆಸಲಾಗುವುದು. ಮಾಸ್ಟರ್​ ಪ್ಲ್ಯಾನ್​ ರೂಪಿಸುವ ಸಂಸ್ಥೆಯವರೊಂದಿಗೆ ಸಮಾಲೋಚಿಸಿ ತ್ವರಿತವಾಗಿ ಮಾಸ್ಟರ್​ ಪ್ಲ್ಯಾನ್​ ಅಂಗೀಕಾರಕ್ಕೆ ಕ್ರಮ ವಹಿಸುವುದಾಗಿ ಶಾಸಕ ಯಶ್​ಪಾಲ್​ ಭರವಸೆ ನೀಡಿದರು.
"

ಉಡುಪಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ತಾಂತ್ರಿಕ ತೊಡಕು, ವಿಳಂಬ ಆಗುತ್ತಿದ್ದು ನಿಯಮಗಳಲ್ಲಿ ಸರಳೀಕರಣ ವಿಧಾನ ಅಳವಡಿಸಲು ಸೂಚಿಸಿದ್ದೇನೆ. ಈ ಹಿಂದಿನಂತೆ ಏಕ ವಿನ್ಯಾಸ ಅನುಮೋದನೆಯಿಂದ ವಿನಾಯಿತಿ ನೀಡಿ ಮನೆ ಮರು ನಿಮಾರ್ಣಕ್ಕೆ ಪರವಾನಗಿ ಕೊಡಬೇಕಿದೆ. ವಸತಿ ರಹಿತ ಬಡ ಕುಟುಂಬಗಳಿಗೆ ಸರ್ಕಾರ 94 ಸಿಸಿ ಕಾನೂನಿನಡಿ ಮಂಜೂರು ಮಾಡಿದ ಒಂದೆರಡು ಸೆಂಟ್ಸ್​ ನಿವೇಶನಕ್ಕೆ ಏಕ ವಿನ್ಯಾಸ ಅನುಮೋದನೆಯಿಂದ ವಿನಾಯಿತಿ ನೀಡಬೇಕಿದೆ.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net