ಅಂಡರ್​ಪಾಸ್​ ರಸ್ತೆಗೆ ಒದಗಿಸಿ ಅಗತ್ಯ ಸೌಲಭ್ಯ

ಉಡುಪಿಯ ಸಂತೆಕಟ್ಟೆ ಹೆದ್ದಾರಿ ಬಳಿ ಅಂಡರ್​ಪಾಸ್​ ಕಾಮಗಾರಿಯನ್ನು ಯಶ್​ಪಾಲ್​ ಸುವರ್ಣ ಅಧಿಕಾರಿಗಳೊದಿಗೆ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ, ಉಮೇಶ್​ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್​ ನಾಯ್ಕ್​, ಮಹಾಂತೇಶ ಹಂಗರಗಿ, ಉದಯ್​, ಚಿನ್ಮಯ ಮೂರ್ತಿ, ರಾಮ ಪೂಜಾರಿ ಇತರರಿದ್ದರು.
ಉಡುಪಿಯ ಸಂತೆಕಟ್ಟೆ ಹೆದ್ದಾರಿ ಬಳಿ ಅಂಡರ್​ಪಾಸ್​ ಕಾಮಗಾರಿಯನ್ನು ಯಶ್​ಪಾಲ್​ ಸುವರ್ಣ ಅಧಿಕಾರಿಗಳೊದಿಗೆ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ, ಉಮೇಶ್​ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್​ ನಾಯ್ಕ್​, ಮಹಾಂತೇಶ ಹಂಗರಗಿ, ಉದಯ್​, ಚಿನ್ಮಯ ಮೂರ್ತಿ, ರಾಮ ಪೂಜಾರಿ ಇತರರಿದ್ದರು.
Published on

* ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

* ಸಂತೆಕಟ್ಟೆ ಹೆದ್ದಾರಿಯಲ್ಲಿ ಕಾಮಗಾರಿ ಪರಿಶೀಲನೆ

ಉಡುಪಿ: ಸಂತೆಕಟ್ಟೆ ಅಂಡರ್​ಪಾಸ್​ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಆರಂಭವಾಗಿದೆ. ಆದರೆ, ಇನ್ನೂ ಹಲವಾರು ಪೂರಕ ಕಾಮಗಾರಿಗಳು ಸಂತಕಟ್ಟೆ ಹೆದ್ದಾರಿ ಬಳಿ ಆಗಬೇಕಿದೆ. ವಾಹನಗಳ ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಸೌಲಭ್ಯದ ಕುರಿತಾಗಿ ತಕ್ಷಣವೇ ಕ್ರಮ ವಹಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.
ಉಡುಪಿ-ಕುಂದಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭಾ ಅಧಿಕಾರಿಗಳೊಂದಿಗೆ ಶುಕ್ರವಾರ (ಜೂ.5) ಭೇಟಿ ನೀಡಿ ಅಂಡರ್​ ಪಾಸ್​ ಬಸ್​ ಶೆಲ್ಟರ್​ ಸಹಿತ ಪೂರಕ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ಹಲವು ಕೆಲಸ ಬಾಕಿ

ಹೆದ್ದಾರಿಯ ಎರಡೂ ಬದಿಯಲ್ಲಿ ನಿಗದಿತ ಸ್ಥಳದಲ್ಲಿ ಬಸ್​ ನಿಲ್ದಾಣ, ಶೌಚಾಲಯ, ಅಂಡರ್​ಪಾಸ್​ ಸೇತುವೆ ಮೇಲೆ ಡಿವೈಡರ್​ ಅಳವಡಿಕೆ, ತಡೆಗೋಡೆ ನಿರ್ಮಾಣ, ನೇಜಾರು ತಿರುವಿನಲ್ಲಿ ವೃತ್ತ ನಿರ್ಮಾಣ, ಎರಡೂ ಬದಿಯ ಸರ್ವೀಸ್​ ರಸ್ತೆ ಆರಂಭಗೊಳ್ಳುವಲ್ಲಿ ಅಗಲೀಕರಣ, ಸರ್ವೀಸ್​ ರಸ್ತೆಯ ಸುರಕ್ಷತಾ ಬೇಲಿ ವಿಸ್ತರಣೆ, ಸರ್ವೀಸ್​ ರಸ್ತೆಯ ಬದಿಯಲ್ಲಿ ಇಂಟರ್​ಲಾಕ್​ ಅಳವಡಿಕೆ, ಆಶೀರ್ವಾದ್​ ಲಕ್ಷ್ಮೀನಗರ ಜಂಕ್ಷನ್​ ಅಗಲೀಕರಣ, ದಾರಿದೀಪ ಅಳವಡಿಕೆಯ ಹಲವು ಕೆಲಸ ಆಗಬೇಕಿದೆ. ಈ ಎಲ್ಲ ಕೆಲಸವನ್ನೂ ತಕ್ಷಣ ಕೈಗೊಳ್ಳಬೇಕು ಎಂದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಸ್ಥಳೀಯ ಮುಖಂಡರಾದ ಉಮೇಶ್​ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್​ ನಾಯ್ಕ್​, ಉದಯ್​, ಚಿನ್ಮಯ ಮೂರ್ತಿ, ರಾಮ ಪೂಜಾರಿ, ಪ್ರಸಾದ್​ ರಾವ್​, ಅಮಿತ್​ ಪೂಜಾರಿ, ಬೈಕಾಡಿ ಸುಪ್ರಸಾದ್​ ಶೆಟ್ಟಿ, ನಗರಸಭಾ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
"

ಕುಂದಾಪುರ ಭಾಗಕ್ಕೆ ತೆರಳುವ ಎಕ್ಸ್​ಪ್ರೆಸ್​ ಬಸ್​ಗಳು ಸಂತೆಕಟ್ಟೆ ಜಂಕ್ಷನ್​ಗೆ ಬಾರದೆ ನೇರವಾಗಿ ಸಂಚರಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಸರ್ವೀಸ್​ ರಸ್ತೆಯ ಮೂಲಕ ಬಸ್​ಗಳು ಸಂಚರಿಸುವಂತೆ ಕ್ರಮ ವಹಿಸಬೇಕು.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net