ಉಡುಪಿ: ವಿಬುಧೇಶ ತೀರ್ಥ ಶ್ರೀಪಾದರ ಅನನ್ಯ ಚಿಂತನೆಯು ನನ್ನಂಥ ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ. ಸೂಕ್ತ ಮಾರ್ಗದರ್ಶನ ಇದ್ದಲ್ಲಿ ಶ್ರೇಷ್ಠ ಸಾಧನೆ ಸಾಧ್ಯ ಎನ್ನುವುದಕ್ಕೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ ಉತ್ತಮ ಉದಾಹರಣೆ. ಅತಿದೊಡ್ಡ ಯುವ ಶಕ್ತಿ ಹೊಂದಿರುವ ನಮ್ಮ ದೇಶವು ವಿಶ್ವಗುರು ಆಗುವಲ್ಲಿ ನಿಮ್ಮಂಥ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಶನಿವಾರ (ಸೆ.19) ಆಯೋಜಿಸಿದ್ದ ರಾಜ್ಯ ಮಟ್ಟದ "ಜ್ಞಾನಂ' ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಸ್ಪರ್ಧೆಗಳ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.
ಅವಕಾಶಗಳ ಸದ್ಬಳಕೆ
ಲೇಖಕಿ ರಶ್ಮಿ ಸಾವಂತ್ ಮಾತನಾಡಿ, ನಮ್ಮನ್ನು ನಾವೇ ನಿರಾಕರಿಸುವ ಬದಲು ನಮ್ಮತನದ ಬಗ್ಗೆ ಅಭಿಮಾನ ಪಡಬೇಕಿದೆ. ಸ್ವಂತದ ನಿರಾಕರಣೆ ಸಾಧನೆಗೆ ಅಡ್ಡಿಯಾಗುತ್ತದೆ. ಸದಾ ನಾಯಕತ್ವದ ಹುಮ್ಮಸ್ಸು ಮತ್ತು ಅವಕಾಶಗಳ ಸದ್ಬಳಕೆ ಸಾಧಕರನ್ನಾಗಿಸುತ್ತದೆ ಎಂದರು.
ರಾಷ್ಟ್ರೊತ್ಥಾನ ಪ.ಪೂ. ಕಾಲೇಜ್ನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸು ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್ ಹೊಳ್ಳ ಶುಭ ಹಾರೈಸಿದರು. ಕಾಲೇಜ್ನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್., ಜ್ಞಾನಂ ಫೆಸ್ಟ್ನ ಸಂಯೋಜಕಿ ಲವಿಟಾ ಡಿಸೋಜಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿನಾಯಕ ಪೈ ಬಿ., ಡಾ.ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಾಯಕ ವಿಶ್ವಾಸ್ ಕರ್ವಾಲೋ ಸ್ವಾಗತಿಸಿದರು. ಉಪಾಧ್ಯಕ್ಷ ದೇವರಾಜ್ ಪುತ್ರನ್ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.