ಉಡುಪಿಯಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್, ಅಬೀದ್ ಗದ್ಯಾಳ್, ದಿನಕರ್ ಶೆಟ್ಟಿ ಅಂಪಾರು, ಆನಂದ ಜತ್ತಣ್ಣ, ದಯಾನಂದ ಬೆನ್ನೂರು, ರಾಜೇಂದ್ರ, ರೋಶನ್ ಶೆಟ್ಟಿ ಇತರರಿದ್ದರು.
Published on:
Copied
Follow Us
* ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ
* ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
ಉಡುಪಿ: ಸರ್ಕಾರಿ ನೌಕರರು ಸಮಯದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಮಾನಸಿಕ ಹಾಗೂ ದೈಹಿಕ ಒತ್ತಡ ಪರಿಣಾಮಕಾರಿಯಾಗಿ ನಿಭಾಯಿಸಲು ಕ್ರೀಡೆ, ಯೋಗ, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರಿಗೆ ಆಯೋಜಿಸಿರುವ ಈ ಕ್ರೀಡಾಕೂಟವು ಕೆಲಸದ ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಅತ್ಯಗತ್ಯ
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಜತೆಯಾಗಿ ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡುವ ಕಾರ್ಯ ಮಾಡಬೇಕು. ಸರ್ಕಾರಿ ನೌಕರರು ಶೃದ್ಧೆ ಮತ್ತು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದಾಗ ಸರ್ಕಾರಕ್ಕೂ ಸಹ ಒಳ್ಳೆಯ ಹೆಸರು ಬರುತ್ತದೆ. ದಿನನಿತ್ಯದ ಕರ್ತವ್ಯದ ಮಧ್ಯೆಯೂ ಸರ್ಕಾರಿ ನೌಕರರು ಆಟೋಟಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ವ್ಯಾಯಾಮ ಮಾಡಿ
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿದ್ದರೂ ನೌಕರರು ನೂರು ಪ್ರತಿಶತದಷ್ಟು ಕಾರ್ಯದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುವುದು ಸಹಜ. ಒತ್ತಡ ನಿಭಾಯಿಸಲು ಕಡ್ಡಾಯವಾಗಿ ದಿನನಿತ್ಯ ಒಂದು ಗಂಟೆ ಕ್ರೀಡೆ ಅಥವಾ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತಣ್ಣ, ಜಿಲ್ಲಾ ಖಜಾಂಜಿ ದಯಾನಂದ ಬೆನ್ನೂರು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡಾ ಕಾರ್ಯದರ್ಶಿಗಳಾದ ದಿನಕರ್ ನಾಯ್ಕ್ ಹಾಗೂ ದೀಪಾ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಹಾಗೂ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"
ಸರ್ಕಾರಿ ನೌಕರರ ಸಂಘವು ಸದಸ್ಯರಿಗಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಕ್ರೀಡಾಕೂಟವನ್ನೂ ಅಭೂತಪೂರ್ವವಾಗಿ ಸಂಘಟಿಸಿದೆ. ಸಂಘದ ಪ್ರಯತ್ನ ಅಭಿನಂದನೀಯ. ಸಂಘದ ಬಹುಕಾಲದ ಸ್ವಂತ ಕಟ್ಟಡದ ಬೇಡಿಕೆ ಈಡೇರಿಸಲಾಗುವುದು.