ಮಳೆಗಾಲದ ಸಿದ್ಧತೆ ಕಾರ್ಯ ತ್ವರಿತವಾಗ

ಉಡುಪಿಯ ತಾಪಂ ಸಭಾಂಗಣದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಮಳೆಗಾಲದ ಪೂರ್ವಸಿದ್ಧತಾ ಸಭೆ ನಡೆಸಿದರು. ತಾಪಂ ಇಒ ವಿಜಯಾ ಇದ್ದರು.
ಉಡುಪಿಯ ತಾಪಂ ಸಭಾಂಗಣದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಮಳೆಗಾಲದ ಪೂರ್ವಸಿದ್ಧತಾ ಸಭೆ ನಡೆಸಿದರು. ತಾಪಂ ಇಒ ವಿಜಯಾ ಇದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

* ತಾಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ

ಉಡುಪಿ: ಮಳೆಗಾಲ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳಷ್ಟು ಕಾಲಾವಕಾಶ ಇದ್ದು, ಈಗಿನಿಂದಲೇ ಬೇಕಾದ ಎಲ್ಲ ಸಿದ್ಧತೆಗಳನ್ನು ಆಯಾ ಗ್ರಾಪಂಗಳು ಮಾಡಿಕೊಳ್ಳಬೇಕು. ಅಪಾಯಕಾರಿ ಮರಗಳ ತೆರವು, ವಿದ್ಯುತ್​ ತಂತಿಗಳ ಪರಿಶೀಲನೆ, ಚರಂಡಿ ಹೂಳೆತ್ತುವ ಕಾರ್ಯ ತ್ವರಿತವಾಗಿ ಆರಂಭಿಸಬೇಕು. ಮಳೆಗಾಲದಲ್ಲಿ ಅರಣ್ಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕದಳದ ಅಧಿಕಾರಿಗಳ ಸಂಪರ್ಕ ಇಟ್ಟುಕೊಂಡು ತುರ್ತು ಸಂದರ್ಭದಲ್ಲಿ ಅವರನ್ನು ಕೂಡಲೇ ಸಂಪರ್ಕಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು. 
ಉಡುಪಿಯ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮಳೆಗಾಲದ ಪೂರ್ವಭಾವಿ ಸಿದ್ಧತೆ ಹಾಗೂ ವಿವಿಧ ಇಲಾಖೆಯ ಕಾಮಗಾರಿಗಳ ಅನುಷ್ಠಾನ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಶನಿವಾರ (ಏ.18) ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೊಠಡಿ ದುರಸ್ತಿಗೆ ನೀಡಿ ಅನುದಾನ

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಮಾತನಾಡಿ, ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಥಮಿಕ ಶಾಲಾ ವಿಭಾಗದ ಎರಡು ಕೊಠಡಿಗಳು ಸೋರುತ್ತಿದೆ. ಅದರ ದುರಸ್ತಿಗೆ ಅನುದಾನ ಬೇಕಾಗಿದೆ ಎಂದರು. ಮಕ್ಕಳ ರಕ್ಷಣಾ ಆಯೋಗವು ಶಾಲಾ ಆವರಣದಲ್ಲಿರುವ ಅಪಾಯಕಾರಿ ಮರಗಳ ತೆರವು ಹಾಗೂ ವಿದ್ಯುತ್​ ತಂತಿಗಳ ತೆರವಿಗೂ ಸೂಚನೆ ನೀಡಿದೆ ಎಂದು ತಿಳಿಸಿದರು.

ಪಿಂಚಣಿ ಪರಿಶೀಲನೆ ಬಾಕಿ

ಉಡುಪಿ ತಾಲೂಕಿನಲ್ಲಿ 5,587 ಮಂದಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ ಐಟಿ ಪಾವತಿದಾರರು ಹಾಗೂ ಎಪಿಎಲ್​ ಪಡಿತರ ಚೀಟಿಯಲ್ಲಿ ಇರುವವರನ್ನು ಕೈಬಿಡಲು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಇದರಲ್ಲಿ 1,339 ಮಂದಿಯ ಪರಿಶೀಲನೆ ಕಾರ್ಯ ಮಾಡಲಾಗಿದೆ. ಉಳಿದವರ ಪರಿಶೀಲನಾ ಕಾರ್ಯ ಇನ್ನೂ ಮಾಡಬೇಕಾಗಿದೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು.

ನಿರ್ಮಿತಿ ಕೇಂದ್ರದ ಕಾಮಗಾರಿ ಮಾಹಿತಿ

ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದ ರಂಗ ಮಂದಿರ, ರಸ್ತೆ ಸೇರಿದಂತೆ ಒಟ್ಟು 63 ಕಾಮಗಾರಿಗಳಲ್ಲಿ 35 ಪ್ರಗತಿಯಲ್ಲಿದೆ. ಐದು ಕಾಮಗಾರಿಗಳಿಗೆ ಅಂದಾಜು ವೆಚ್ಚ ಆಗಬೇಕಾಗಿದೆ. 20 ಕಾಮಗಾರಿ ಆರಂಭ ಆಗಬೇಕಿದೆ ಎಂದು ಇಂಜಿನಿಯರ್​ಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ನಿರ್ದೇಶಕಿ ಫರ್ಜಾನಾ ಹಾಗೂ ತಾಲೂಕು ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

300 ಕ್ವಿಂಟಲ್​  ಬಿತ್ತನೆ ಬೀಜಕ್ಕೆ ಪ್ರಸ್ತಾವನೆ

ಈ ಬಾರಿ ರೈತರಿಗೆ ವಿತರಿಸಲು 300 ಕ್ವಿಂಟಲ್​  ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಮೇ ತಿಂಗಳಲ್ಲಿ ವಿತರಿಸಲಾಗುವುದು ಕಳೆದ ಬಾರಿ 250 ಕ್ವಿಂಟಲ್​ ಬೀಜ ವಿತರಿಸಿದ್ದು, ಈ ಬಾರಿ ಹೆಚ್ಚುವರಿ 50 ಕ್ವಿಂಟಲ್​ ಪ್ರಸ್ತಾವನೆ ಸಲ್ಲಿಸಲಾಗಿದೆ. 150 ಮೆಟ್ರಿಕ್​ ಟನ್​ ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಉಡುಪಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕಲ್ಲೇಶ್​ ಪ್ರಸಾದ್​ ತಿಳಿಸಿದರು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕೃಷಿ ತರಬೇತಿ ಕೇಂದ್ರವಿದ್ದರೂ ಉಡುಪಿಯಲ್ಲಿ ಇರಲಿಲ್ಲ. ಇದೀಗ ಉಡುಪಿಗೂ ಮಂಜೂರಾಗಿ ವಾರಂಬಳ್ಳಿ ಗ್ರಾಮದಲ್ಲಿ ನಿಮಾರ್ಣ ಕಾಮಗಾರಿ ನಡೆಯುತ್ತಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
"

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಪರ್ಕ ರಸ್ತೆಯನ್ನು ವಾರಾಹಿ ಯೋಜನೆ ಹಾಗೂ ಅದಾನಿ ಗ್ಯಾಸ್​ ಪೈಪ್​ಲೈನ್​ಗಾಗಿ ಅಗೆಯಲಾಗಿದ್ದು, ಕೂಡಲೇ ದುರಸ್ತಿ ಮಾಡಬೇಕು. ಮಳೆಗಾಲದಲ್ಲಿ ಈ ರಸ್ತೆ ಕುಸಿಯದ ರೀತಿಯಲ್ಲಿ ಕಾಮಗಾರಿ ಮಾಡಬೇಕು. ಕೆಲಸ ಮುಗಿದ ಬಳಿಕ ನಗರಸಭಾ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅದಾನಿ ಕಂಪನಿ ಅಧಿಕಾರಿಗಳು ತಿಳಿಸದಂತೆ ಸೋಮವಾರದಿಂದಲೇ ಕಾಮಗಾರಿ ಆರಂಭಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net