ಕೆಮ್ಮಣ್ಣು ಗ್ರಾಮಕ್ಕೆ ವಿದ್ಯುತ್​ ಸಬ್​ಸ್ಟೇಷನ್​

ಉಡುಪಿಯ ಕೆಮ್ಮಣ್ಣು ಗ್ರಾಪಂನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಯಶ್​ಪಾಲ್​ ಸುವರ್ಣ ಮಾತನಾಡಿದರು. ವಿಜಯಾ, ರಾಮಚಂದ್ರ ನಾಯಕ್​, ಅನೂಷಾ, ಸಚಿನ್​, ಅನಿಲ್​ ಕುಮಾರ್​ ಇದ್ದರು.
ಉಡುಪಿಯ ಕೆಮ್ಮಣ್ಣು ಗ್ರಾಪಂನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಯಶ್​ಪಾಲ್​ ಸುವರ್ಣ ಮಾತನಾಡಿದರು. ವಿಜಯಾ, ರಾಮಚಂದ್ರ ನಾಯಕ್​, ಅನೂಷಾ, ಸಚಿನ್​, ಅನಿಲ್​ ಕುಮಾರ್​ ಇದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* ಗ್ರಾಪಂನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ

ಉಡುಪಿ: ತಾಲೂಕಿನ ಕೆಮ್ಮಣ್ಣು ಭಾಗದಲ್ಲಿ ನಿರಂತರ ವಿದ್ಯುತ್​ ಸಮಸ್ಯೆ ಇರುವ ಕುರಿತು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಸಬ್​ಸ್ಟೇಷನ್​ ಮಂಜೂರಾಗಿದೆ. ಆದರೆ, ಇನ್ನೂ ಸರ್ಕಾರಿ ಜಾಗ ಲಭಿಸಿಲ್ಲ. ತ್ವರಿತವಾಗಿ ಸ್ಥಳ ಅಂತಿಮಗೊಳಿಸಿ ವಿದ್ಯುತ್​ ಸಮಸ್ಯೆ ನೀಗಿಸಲಾಗುವುದು. ತುರ್ತು ಸಂದರ್ಭದಲ್ಲಿ ಸ್ಪಂದಿಸುವಂತೆ ಮೆಸ್ಕಾಂನ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.
ತೋನ್ಸೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ (ಆ.5) ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಕ್ಕೆ ಮತ್ತೆ ಒತ್ತಾಯಿಸುವೆ

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಇನ್ನಿತರ ಪಿಂಚಣಿ ರದ್ದಾಗಿರುವ ಕುರಿತು ಹಿಂದೆ ನಡೆದಿದ್ದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ, ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಈ ಕುರಿತು ಮತ್ತೊಮ್ಮೆ ನಾಡಿದ್ದು ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

ಪಾರ್ಕಿಂಗ್​ ಸಮಸ್ಯೆ ನೀಗಿಸಿ

ಕೆಮ್ಮಣ್ಣಿನಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಂದು ರಸ್ತೆಬದಿ ವಾಹನ ಪಾರ್ಕಿಂಗ್​ನಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಕೂಡಲೇ ಅಗತ್ಯ ಕ್ರಮ ವಹಿಸುವಂತೆ ಪೋಲಿಸ್​ ಇಲಾಖೆಗೆ ಸೂಚಿಸಿದರು. ಪ್ರತಿ ಗುರುವಾರ ಸದ್ರಿ ಸ್ಥಳದಲ್ಲಿ ಪೊಲೀಸ್​ ಸಿಬ್ಬಂದಿ ನಿಯೋಜಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕೆಮ್ಮಣ್ಣಿನ ತಿಮ್ಮಣ್ಣ ಕುದ್ರುವಿನಿಂದ ಹಾರಾಡಿವರೆಗೆ ಸೇತುವೆ ನಿರ್ಮಿಸಿದರೆ ಬ್ರಹ್ಮಾವರ ತಲುಪಲು ಜನರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಉಡುಪಿ ತಾಪಂ ಇಒ ವಿಜಯಾ, ಮಲ್ಪೆ ವೃತ್ತ ಪೊಲೀಸ್​ ನಿರೀಕ್ಷಕ ರಾಮಚಂದ್ರ ನಾಯಕ್​, ಕೆಮ್ಮಣ್ಣು ಗ್ರಾಪಂ ಆಡಳಿತಾಧಿಕಾರಿ ಅನೂಷಾ, ಉಡುಪಿ ನಗರ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಚಿನ್​, ಮಲ್ಪೆ ಠಾಣೆಯ ಉಪನಿರೀಕ್ಷಕ ಅನಿಲ್​ ಕುಮಾರ್​, ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂನ ಮಾಜಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ನಿಯಮ ಮೀರಿ ಮದರಸಾ ಆರಂಭ

ಸ್ಥಳೀಯರಾದ ಅಫ್ತಾಬ್​ ಆಲಂ ಮಾತನಾಡಿ, ಹೂಡೆ ಭಾಗದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ಗ್ರಾಪಂನಲ್ಲಿ ವಸತಿ ಉದ್ದೇಶಕ್ಕೆ 2,250 ಚದರ್​ ಅಡಿ ಅನುಮತಿ ಪಡೆದು ಸುಮಾರು 7 ಸಾವಿರ ಚದರ್​ ಅಡಿಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿ ದಾರುಸ್ಸುಲ್​ ಎಜುಕೇಷನ್​ ಆ್ಯಂಡ್​ ಚಾರಿಟೇಬಲ್​ ಟ್ರಸ್ಟ್​ನವರು ನಿಯಮಬಾಹಿರವಾಗಿ ಮತ್ತು ಅಕ್ರಮವಾಗಿ ಮದರಸಾ ನಡೆಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಗ್ರಾಪಂನವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಕಟ್ಟಡಗಳಿಗೂ ನಿಯಮ ಮೀರಿ ಅನುಮತಿ ನೀಡಿದ್ದಾರೆಂದು ಗ್ರಾಮಸ್ಥರು ಇದೇವೇಳೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್​ಪಾಲ್​, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಾನೂನು ಮೀರಿ ಕೆಲಸ ನಿರ್ವಹಿಸಿದ ಅಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net