ನ. 15ರೊಳಗೆ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನ ನಿಗದಿಯಾಗದಿದ್ದರೆ ಪ್ರತಿಭಟನೆ

district hospital
ಶಾಸಕ ಯಶ್ಪಾಲ್​ ಎ. ಸುವರ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on: 

ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ವೈದ್ಯಕಿಯ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರು ನ.15ರೊಳಗೆ ಲೋಕಾರ್ಪಣೆ ದಿನಾಂಕ ಘೋಷಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಧರಣಿ ನಡೆಸಲಾಗುವುದು ಎಂದು ಶಾಸಕ ಯಶ್ಪಾಲ್​ ಎ. ಸುವರ್ಣ ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಗೊಂಡು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 28 ವರ್ಷಗಳಾದರೂ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸುಸಜ್ಜಿತ ಜಿಲ್ಲಾಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ.

2021ರಲ್ಲಿ ನೂತನ ಜಿಲ್ಲಾಸ್ಪತ್ರೆಯ ನಿಮಾರ್ಣ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿಯೇ ಕಟ್ಟಡ ಬಹುತೇಕ ಪೂರ್ಣಗೊಂಡಿದೆ. ಆದರೂ ಆಸ್ಪತ್ರೆ ಈವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಕಳೆದ ಮೂರೂವರೆ ವರ್ಷಗಳಿಂದ ವೈಯಕ್ತಿಕವಾಗಿ, ಪತ್ರಗಳ ಮೂಲಕ ಹಾಗೂ ವಿಧಾನಮಂಡಲದ ಅಧಿವೇಶನಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ನೂತನ ಆಸ್ಪತ್ರೆಯ ಮೂಲ ಯೋಜನೆಗೆ ಅನುಗುಣವಾಗಿ ಗುಣಮಟ್ಟದ ಹೊಸ ಪೀಠೋಪಕರಣಗಳು, ಆಧುನಿಕ ವೈದ್ಯಕಿಯ ಉಪಕರಣಗಳು ಹಾಗೂ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್​ಐ, ಸಿಟಿ ಸ್ಕಾ$ನಿಂಗ್​, ಡಿಜಿಟಲ್​ ಎಕ್ಸ್​ರೇ, ತೀವ್ರ ನಿಗಾ ಘಟಕ (ಐಸಿಯು), ವೆಂಟಿಲೇಟರ್​ ಸೇರಿದಂತೆ ಅಗತ್ಯ ವೈದ್ಯಕಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ, ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಅಗತ್ಯ ಹುದ್ದೆಗಳನ್ನು ಮಂಜೂರು ಮಾಡಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದಿನೇಶ್​ ಅಮೀನ್​, ಪ್ರಭಾಕರ ಪೂಜಾರಿ, ದಿನಕರ ಬಾಬು, ರಾಜು ಕುಲಾಲ್​, ಗಿರೀಶ್​ ಅಂಚನ್​ ಹಾಗೂ ಜಗದೀಶ್​ ಆಚಾರ್ಯ, ವಿಜಯ್​ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.