ಸಂಸ್ಕೃತಿ, ಸಂಪ್ರದಾಯದಲ್ಲಿ ಬೇಡ ರಾಜಕೀಯ

ಉಡುಪಿಯ 80 ಬಡಗುಬೆಟ್ಟು ಗ್ರಾಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ 'ಉಡುಪಿ ಕಂಬಳ'ದ ಪೋಸ್ಟರ್​ ಬಿಡುಗಡೆ ಮಾಡಿದರು. ಗುರ್ಮೆ ಸುರೇಶ್​ ಶೆಟ್ಟಿ, ಯಶ್​ಪಾಲ್​ ಸುವರ್ಣ, ಸುನೀಲಕುಮಾರ್​, ಹರೀಶ್​ ಪೂಂಜಾ, ಗುರುರಾಜ ಗಂಟಿಹೊಳೆ, ಡಾ.ದೇವಿಪ್ರಸಾದ್​ ಶೆಟ್ಟಿ ಇತರರಿದ್ದರು.
ಉಡುಪಿಯ 80 ಬಡಗುಬೆಟ್ಟು ಗ್ರಾಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ 'ಉಡುಪಿ ಕಂಬಳ'ದ ಪೋಸ್ಟರ್​ ಬಿಡುಗಡೆ ಮಾಡಿದರು. ಗುರ್ಮೆ ಸುರೇಶ್​ ಶೆಟ್ಟಿ, ಯಶ್​ಪಾಲ್​ ಸುವರ್ಣ, ಸುನೀಲಕುಮಾರ್​, ಹರೀಶ್​ ಪೂಂಜಾ, ಗುರುರಾಜ ಗಂಟಿಹೊಳೆ, ಡಾ.ದೇವಿಪ್ರಸಾದ್​ ಶೆಟ್ಟಿ ಇತರರಿದ್ದರು.
Published on

* ಕಾಂಗ್ರೆಸ್ಸಿಗರಿಗೆ ಶಾಸಕ ಗುರ್ಮೆ ಶೆಟ್ಟಿ ಆಗ್ರಹ

* ಉಡುಪಿ ಕಂಬಳದ ಕೆರೆಗೆ ಶಂಕುಸ್ಥಾಪನೆ

ಉಡುಪಿ: ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ 80 ಬಡಗುಬೆಟ್ಟು ಗ್ರಾಮದಲ್ಲಿ ಉಡುಪಿ ಕಂಬಳ ನಡೆಯಲಿದೆ. 2 ಕೋಟಿ ರೂ. ವೆಚ್ಚದಲ್ಲಿ ಕಂಬಳ ಕೆರೆಗೆ ಶಂಕುಸ್ಥಾಪನೆ ಮಾಡಲಾಗುತ್ತಿದ್ದು, ಈಗಾಗಲೇ 60 ಲಕ್ಷ  ರೂ. ವೆಚ್ಚದ ಕಾಮಗಾರಿ ಮುಗಿದಿದೆ. ಅರ್ಚಕರು ನೀಡಿದ ಮುಹೂರ್ತದಲ್ಲಿ ಕೆಲಸ ಮಾಡಬೇಕಿದೆ. ಭೂತಾರಾಧನೆ, ದೈವಾರಾಧನೆ, ಕೋಲ, ಯಕ್ಷಗಾನಗಳು ತುಳುನಾಡಿನ ಸಂಸ್ಕೃತಿ, ಸಂಪ್ರದಾಯವಾಗಿದೆ. ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಆಗ್ರಹಿಸಿದರು.
ಉಡುಪಿ ತಾಲೂಕಿನ ಕಾಪು ವಿಧಾನಸಭಾ ಕ್ಷೇತ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದಲ್ಲಿ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ವತಿಯಿಂದ ಶನಿವಾರ (ಫೆ.28) ಆಯೋಜಿಸಿದ್ದ ಉಡುಪಿ ಕಂಬಳ ಕೆರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಐತಿಹಾಸಿಕ ಕಾರ್ಯಕ್ರಮ

ಉಡುಪಿ ಕಂಬಳದ ಪೋಸ್ಟರ್​ ಬಿಡುಗಡೆಗೊಳಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇತಿಹಾಸದಲ್ಲಿ ಪ್ರಥಮ ಬಾರಿಗೆ ಉಡುಪಿಯಲ್ಲಿ ಕಂಬಳ ನಡೆಯುತ್ತಿದೆ. ಅದರ ಶಂಕುಸ್ಥಾಪನೆಗೆ ಅವಳಿ ಜಿಲ್ಲೆಯ 7 ಶಾಸಕರು, ಓರ್ವ ಸಂಸದ, ಓರ್ವ ಎಂಎಲ್​ಸಿ ಪಾಲ್ಗೊಂಡಿರುವುದೂ ಸಹ ಇತಿಹಾಸ. ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿರುವುದು ನಿಜಕ್ಕೂ ವಿಪರ್ಯಾಸ. ಯಾಕೆ ವಿರೋಧಿಸುತ್ತೇವೆ ಎನ್ನುವುದು ವಿರೋಧಿಸುವವರಿಗೂ ತಿಳಿದಂತಿಲ್ಲ. ಇಷ್ಟೊಂದು ಗೊಂದಲ ಜಿಲ್ಲಾಡಳಿತ, ಸರ್ಕಾರಕ್ಕೆ ಇರಬಾರದು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠರಿಗೆ ಉಭಯ ಸಂಕಟ. ಸರ್ಕಾರದ ಆದೇಶ ಪಾಲಿಸುವುದು ಅವರಿಗೆ ಅನಿವಾರ್ಯ. ಆದರೆ, ಕಂಬಳ ವಿಚಾರದಲ್ಲಿ ಅಡ್ಡಿ, ರಾಜಕೀಯ ಮಾಡಬಾರದು ಎಂದರು.

ವ್ಯಾಪ್ತಿಯ ಶಾಸಕರೇ ಅಧ್ಯಕ್ಷರು

ರಾಜ್ಯ ಕಂಬಳ ಅಸೋಸಿಯೇಷನ್​ನ ಐಕಳಬಾವ ಡಾ. ದೇವಿಪ್ರಸಾದ್​ ಶೆಟ್ಟಿ ಮಾತನಾಡಿ, ಕಂಬಳ ಕ್ರೀಡೆಯು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲದೆ ರಾಜ್ಯ, ದೇಶ-ವಿದೇಶದಲ್ಲೂ ಖ್ಯಾತಿ ಗಳಿಸಿದೆ. ಧಮಾರ್ತೀತ, ಪಕ್ಷಾತೀತ, ರೈತಾಪಿ ಮತ್ತು ಮಹಿಳಾ ವರ್ಗದವರು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುವ ಕ್ರೀಡೆಯಾಗಿದೆ. 80 ಬಡಗಬೆಟ್ಟು ಗ್ರಾಮದಲ್ಲಿ ಕಂಬಳ ನಡೆಸಲು ರಾಜ್ಯ ಕಂಬಳ ಸಂಘಟನೆಯಿಂದ ಅವಕಾಶ ನೀಡಲಾಗಿದೆ. ನಮ್ಮ ಅಸೋಸಿಯೇಷನ್​ನಲ್ಲಿ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ನೋಂದಣಿ ಮಾಡಿದೆ. ಏ.25ಕ್ಕೆ ಕಂಬಳ ನಡೆಸಲು ನಾವು ಸೂಚಿಸಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವಂತೆ ಜಿಲ್ಲಾಡಳಿತಕ್ಕೂ ಮನವಿ ಮಾಡಲಾಗಿದೆ. ಕಂಬಳಕ್ಕೆ ವ್ಯಾಪ್ತಿಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಇದು ಶಿಷ್ಟಾಚಾರವಾಗಿದೆ ಎಂದರು.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕುಂದಾಪುರ ಶಾಸಕ ಎ. ಕಿರಣಕುಮಾರ್​ ಕೊಡಗಿ, ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ, ಬಂಟ್ವಾಳ ಶಾಸಕ ರಾಜೇಶ ನಾಯಕ್​, ಬೆಳ್ತಂಗಡಿ ಶಾಸಕ ಹರೀಶ್​ ಪೂಂಜಾ, ವಿಪ ಸದಸ್ಯ ಕ್ಯಾ. ಧನಂಜಯ ಸರ್ಜಿ, ಮಾಜಿ ಶಾಸಕ ಲಾಲಾಜಿ ಮೆಂಡನ್​, ಶ್ರೀಕಾಂತ್​ ಭಟ್​, ವಿಜಯ್​, ಲೋಕೇಶ್​ ಶೆಟ್ಟಿ ಉಪಸ್ಥಿತರಿದ್ದರು. ಮಟ್ಟಾರು ರತ್ನಾಕರ್​ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
"

ಸರ್ಕಾರಿ ಜಾಗದಲ್ಲಿ ಉಡುಪಿ ಕಂಬಳ ಮಾಡಲಾಗುತ್ತಿದೆ. ಅದಕ್ಕಾಗಿ ಕೆರೆ ನಿರ್ಮಾಣಕ್ಕೆ ಫೆ.28ರಂದು ಮುಹೂರ್ತ ನಿಗದಿಯಾಗಿದೆ. ಆದರೆ, ರಾಜಕೀಯದ ಉದ್ದೇಶದಿಂದ ಮಾ.4ರಂದು ಶಂಕು ಸ್ಥಾಪನೆ ನಡೆಸಲು ಕಾಂಗ್ರೆಸ್​ ನಾಯಕರು ಜಿಲ್ಲಾಡಳಿತದ ಮೂಲಕ ದಿನ ನಿಗದಿಸಿದ್ದಾರೆ. ಸಿದ್ದರಾಮಯ್ಯ ಅವರ ಭಾಷೆಯಲ್ಲೇ ಹೇಳುವುದಾದರೆ 'ನಿಮಗೆ ಮಾನ, ಮರ್ಯಾದೆ ಇದ್ದರೆ' ಉಡುಪಿ ಕುಂಬಳಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಸ್ಪಷ್ಟಪಡಿಸಿ. ಬಳಿಕ ಮಾ.4ರಂದು ಮತ್ತೊಮ್ಮೆ ಶಂಕುಸ್ಥಾಪನೆ ಮಾಡಲು ಬನ್ನಿ.

"

ಕೋಟಿ ಚನ್ನಯರು ಸತ್ಯ ಮತ್ತು ಧರ್ಮದ ಪ್ರತೀಕ. ಅವರ ಹೆಸರಿನಲ್ಲಿ ನಡೆಯಲಿರುವ ಉಡುಪಿ ಕಂಬಳಕ್ಕೆ ವಿರೋಧಿಸುವುದು ಸತ್ಯ-ಧರ್ಮದ ವಿರೋಧ ಮಾಡಿದಂತಾಗುತ್ತದೆ. ವಿರೋಧಿಸುವವರ ಕೈ ಸುಡದೇ ಇರದು. ದಯವಿಟ್ಟು ನಮ್ಮೆಲ್ಲರ ಸಂಸ್ಕೃತಿಯಾದ ಕಂಬಳಕ್ಕೆ ವಿರೋಧಿಸಬೇಡಿ.

ಜಿಲ್ಲಾಡಳಿತದಿಂದ ದಿಢೀರ್​ ನಿಷೇಧಾಜ್ಞೆ ಜಾರಿ

ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದಲ್ಲಿ ಫೆ.28ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ನೂತನ ಕಂಬಳ ಕ್ರೀಡಾಂಗಣದ ಗುದ್ದಲಿ ಪೂಜೆ ಹಾಗೂ ಸ್ಥಳದ ವಿಚಾರವಾಗಿ ಸ್ಥಳೀಯರಲ್ಲಿ ಅಸಮಾಧಾನವಿದೆ. ಮಾ.4ರಂದು ಕಂಬಳದ ಶಂಕುಸ್ಥಾಪನೆಗೆ ಜಿಲ್ಲಾಡಳಿತದಿಂದ ಅಧಿಕೃತ ದಿನ ಪ್ರಕಟಿಸಲಾಗಿದೆ. ಆದರೂ ಫೆ.28ರಂದು ಅನಧಿಕೃತವಾಗಿ ಶಂಕುಸ್ಥಾಪನೆ ನಡೆಸುತ್ತಿರುವುದು ಆದೇಶದ ಉಲ್ಲಂನೆಯಾಗುತ್ತದೆ. ಸ್ಥಳದಲ್ಲಿ ಗಲಾಟೆ ಆಗುವ ಸಂಭವವೂ ಇದೆ. ತನ್ನಿಮಿತ್ತ ಬಿ.ಎನ್​.ಎಸ್​.ಎಸ್​. ಕಲಂ.163ರ ಪ್ರಕಾರ ಫೆ..28ರಂದು ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ನಿಷೇಧಾಜ್ಞೆ ಹೊರಡಿಸಿ ಫೆ.27ರ ರಾತ್ರಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶಿಸಿದ್ದರು. ಯಾವುದೇ ವ್ಯಕ್ತಿ ಈ ಆದೇಶ ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತದ ನಿಷೇಧಾಜ್ಞೆ ಇದ್ದರೂ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net