ಉಡುಪಿ ಕಂಬಳ 'ಶಂಕುಸ್ಥಾಪನೆ' ಪ್ರಹಸನ

ಉಡುಪಿಯ 80 ಬಡಗುಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ನಡುವೆಯೇ 'ಉಡುಪಿ ಕಂಬಳ' ಕೆರೆ ನಿರ್ಮಾಣಕ್ಕೆ ಗುರ್ಮೆ ಸುರೇಶ್​ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು. ಗುರುರಾಜ್​ ಗಂಟಿಹೊಳೆ ಹಾಗೂ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ಪದಾಧಿಕಾರಿಗಳಿದ್ದರು.
ಉಡುಪಿಯ 80 ಬಡಗುಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ನಡುವೆಯೇ 'ಉಡುಪಿ ಕಂಬಳ' ಕೆರೆ ನಿರ್ಮಾಣಕ್ಕೆ ಗುರ್ಮೆ ಸುರೇಶ್​ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು. ಗುರುರಾಜ್​ ಗಂಟಿಹೊಳೆ ಹಾಗೂ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ಪದಾಧಿಕಾರಿಗಳಿದ್ದರು.
Published on

* ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ

* ಭೂಮಿಪೂಜೆ ನೆರವೇರಿಸಿದ ಶಾಸಕ ಗುರ್ಮೆ ಶೆಟ್ಟಿ

ಉಡುಪಿ: ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ತುಳುನಾಡಿನ ಸಂಸ್ಕೃತಿ,  ಸಂಪ್ರದಾಯದ ಪ್ರತೀಕವಾಗಿರುವ ಕಂಬಳ ಆಯೋಜಿಸಲಾಗಿದ್ದು, ಕೆರೆ ನಿರ್ಮಾಣದ ಶಂಕುಸ್ಥಾಪನೆ ಕುರಿತಂತೆ ವಿವಾದ ಭುಗಿಲೆದ್ದಿದೆ. ಕೈ-ಕಮಲ ನಾಯಕರ 'ರಾಜಕೀಯ ಪ್ರತಿಷ್ಠೆ'ಯ ಕಣವಾಗಿದೆ.
ಉಡುಪಿ ತಾಲೂಕು ವ್ಯಾಪ್ತಿಗೆ ಒಳಪಟ್ಟ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿರುವ 80 ಬಡಗುಬೆಟ್ಟು ಗ್ರಾಮದ ಸರ್ಕಾರಿ ಜಾಗದಲ್ಲಿ 'ಉಡುಪಿ ಕಂಬಳ' ನಡೆಸಲು ಜಿಲ್ಲಾಡಳಿತ ನಿರ್ಧರಿಸಿ, ಅದರ ಶಂಕುಸ್ಥಾಪನೆಗೆ ಮಾ.4ರಂದು ದಿನಾಂಕ ನಿಗದಿಸಿತ್ತು. ಆದರೆ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅವರು ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೂ ಫೆ.28ರಂದೇ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿವಾದವೇನು?

80 ಬಡಗುಬೆಟ್ಟು ಗ್ರಾಮದಲ್ಲಿರುವ ಸರ್ಕಾರಿ ಜಾಗ ಸರ್ವೇ ನಂಬರ್​ 11/1ರಲ್ಲಿ 6.30 ಎಕರೆ ಜಾಗವನ್ನು ಕಂಬಳ ಯೋಜನೆಗಾಗಿಯೇ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಗೆ ಜಿಲ್ಲಾಡಳಿತ ಹಸ್ತಾಂತರಿಸಿದೆ. ಇಲ್ಲಿ ಕಂಬಳ ನಡೆಸಲು ರಾಜ್ಯ ಕಂಬಳ ಅಸೋಸಿಯೇಷನ್​ನಲ್ಲಿ ನೋಂದಣಿ ಮಾಡಿರುವ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಗೆ ಅವಕಾಶವನ್ನೂ ನೀಡಲಾಗಿದೆ. ಇದೀಗ ಕಂಬಳ ಹಾಗೂ ಜಾಗದಲ್ಲಿ ನಡೆದಿರುವ ಕಂಬಳ ಕೆರೆ ಕಾಮಗಾರಿ ವಿಚಾರವಾಗಿ ಸ್ಥಳಿಯ ಕೆಲವರಿಂದ ವಿರೋಧ ವ್ಯಕ್ತವಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಮಾಜಿ ಸಚಿವರಿಂದ ರಾಜಕೀಯ

ನಿಷೇಧಾಜ್ಞೆ ನಡುವೆಯೂ ಕಂಬಳದ ಕೆರೆಗೆ ಶಂಕುಸ್ಥಾಪನೆ ನೆರವೇರಿಸಿದ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿ, ಫೆ.28ರಂದೇ ಶಂಕುಸ್ಥಾಪನೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿತ್ತು. ಎಲ್ಲೆಡೆ ಬಂಟಿಂಗ್ಸ್​, ಬ್ಯಾನರ್​ ಹಾಕಲಾಗಿದೆ. ಸಮಿತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರನ್ನೇ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, 2 ದಿನದಿಂದ ಉಡುಪಿ ಕಂಬಳದ ವಿಚಾರವಾಗಿ ಗೊಂದಲ, ರಾಜಕೀಯ ಮಾಡುತ್ತಿದ್ದಾರೆ. ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವರೂ ಆದ ವಿನಯಕುಮಾರ್​ ಸೊರಕೆ ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿದ್ದಾರೆ. ಸರ್ಕಾರದಿಂದ ಒಂದು ರೂಪಾಯಿ ಅನುದಾನವಿಲ್ಲ. ದಾನಿಗಳು, ಉದ್ಯಮಿಗಳ ಸಹಕಾರದಿಂದ ಉಡುಪಿ ಕಂಬಳ ಮಾಡುತ್ತಿದ್ದೇವೆ. ಆದರೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಒತ್ತಡ ಹಾಕಿಸಿ ಇಂದಿನ ಶಂಕುಸ್ಥಾಪನೆಗೆ ನಿಷೇಧಾಜ್ಞೆ ಹೇರಲಾಗಿದೆ. ಕರಾವಳಿಯ ಬಿಜೆಪಿ ಶಾಸಕರನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಉಡುಪಿ ಕಂಬಳ ನಿಂತರೆ ಅದಕ್ಕೆ ವಿನಯಕುಮಾರ್​ ಸೊರಕೆ ಅವರೇ ಕಾರಣ ಎಂದರು.

ನಾನು ಅಡ್ಡಿಪಡಿಸಿಲ್ಲ

ಉಡುಪಿ ಕಂಬಳದ ಶಂಕುಸ್ಥಾಪನೆ ವಿಚಾರವಾಗಿ 'ವಿಜಯವಾಣಿ'ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಕಂಬಳ ನಡೆಸಲು ಜಿಲ್ಲಾಡಳಿತವೇ ಸರ್ಕಾರಿ ಜಾಗ ನೀಡಿದೆ. ಇಂದಿನ ಶಂಕುಸ್ಥಾಪನೆ ಕಾರ್ಯಕ್ರಮದ ಕುರಿತು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಜಿಲ್ಲಾಡಳಿತಕ್ಕೆ ಮಾಹಿತಿಯನ್ನೇ ನೀಡಿಲ್ಲ. ತಮ್ಮ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಪ್ರಸ್ತುತ ಜಾಗದಲ್ಲಿ ಅನೇಕರು ಕೃಷಿ ಮಾಡುತ್ತಿದ್ದರು. ಅಲ್ಲಿ ಅವರ ಜೆಸಿಬಿ ಬಳಸಿ ಕಂಬಳದ ಕೆರೆ ಕಾಮಗಾರಿ ಮಾಡಿಸುತ್ತಿದ್ದಾರೆ. ಅಲ್ಲಿದ್ದ ಅನೇಕ ಮರ ಕಡಿಯಲಾಗಿದ್ದು, ಅವು ಎಲ್ಲಿ ಹೋದವು? ಅರಣ್ಯ ಇಲಾಖೆಯವರು ಈ ಕುರಿತು ಪ್ರಕರಣವನ್ನೂ ದಾಖಲಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಮಾ.4ರಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಂಬಳದ ಶಂಕುಸ್ಥಾಪನೆ ನೆರವೇರಿಸುತ್ತಿದ್ದರು. ಆದರೆ, ಗುರ್ಮೆ ಶೆಟ್ಟಿ ಅವರಿಗೇಕೆ ಅವಸರ? ಮಾಧ್ಯಮದವರ ಬಳಿ ವಿನಯಕುಮಾರ್​ ಸೊರಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಹೇಳಿದ್ದು ಅದು ಅಸತ್ಯ. ಪಕ್ಷಾತೀತ ಕಾರ್ಯಕ್ರಮ ಎಂದಿದ್ದಾರೆ. ಅಲ್ಲಿ ಒಬ್ಬರಾದರೂ ಕಾಂಗ್ರೆಸ್​ ನಾಯಕರು ಇದ್ದರೇ ಎಂದು ಪ್ರಶ್ನಿಸಿದರು.  
"

ಜಿಲ್ಲಾ ಮಟ್ಟದಲ್ಲಿ ಕಂಬಳ ನಡೆಸುವ ಉದ್ದೇಶದಿಂದ 80 ಬಡಗುಬೆಟ್ಟು ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ 6.30 ಎಕರೆ ಜಾಗವನ್ನು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಗೆ ನಾನು ಹಸ್ತಾಂತರಿಸಿದ್ದೇನೆ. ಕಂಬಳದ ಕೆರೆ ನಿರ್ಮಾಣಕ್ಕೆ ಮಾ.4ರಂದು ಭೂಮಿಪೂಜೆಗೆ ಜಿಲ್ಲಾಡಳಿತದಿಂದ ದಿನಾಂಕ ನಿಗದಿ ಮಾಡಲಾಗಿದ್ದು, ಅಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು (ಫೆ.28) ನಡೆದ ಶಂಕುಸ್ಥಾಪನೆ ಕಾರ್ಯಕ್ರಮ ಅನಧಿಕೃತ. ನಿಷೇಧಾಜ್ಞೆ ವಿಧಿಸಿದ್ದರೂ ಶಂಕುಸ್ಥಾಪನೆ ಮಾಡಲಾಗಿದೆ. ಆಜ್ಞೆ ಉಲ್ಲಂಘಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net