

ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಬಿಲ್ ವಸೂಲಿಗ, ಗ್ರಾಪಂ ಸಿಬ್ಬಂದಿ ಮಂಜುನಾಥ್ ಎಂಬುವರು ಮನೆ ತೆರಿಗೆಯಲ್ಲಿ ವಸೂಲಾದ ಹಣವನ್ನು ಸ್ವಂತಕ್ಕೆ ಬಳಸಿ, ಹಣ ದುರ್ಬಳಕೆ ಮಾಡಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬುಧವಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಹಣ ದುರ್ಬಳಕೆ ಬಗ್ಗೆ ಶಿವಪುರ ಪಿಡಿಒ ಅಶೋಕ್ ಗುರುವಾರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚನೆ ಪ್ರಕರಣ ದಾಖಲಾಗಿದೆ. ಮಂಜುನಾಥ್ ಶಿವಪುರ(40) 7.50 ಲಕ್ಷ ರೂ. ಸ್ವಂತಕ್ಕೆ ಬಳಸಿಕೊಂಡಿದ್ದರು.
ಪ್ರಕರಣ ಗಮನಕ್ಕೆ ಬಂದ ಬಳಿಕ ವಿಚಾರಣೆ ನಡೆಸಿದ ಶಿವಪುರ ಪಿಡಿಒ ನೋಟಿಸ್ ನೀಡಿದ್ದು, 3 ಲಕ್ಷ ರೂ. ಪಂಚಾಯಿತಿಗೆ ಮರುಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಪಿಡಿಒ ಮಾಹಿತಿ ನೀಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.