ವಿಕಲಚೇತನ ಮಕ್ಕಳೂ ಸಮಾಜದ ಆಸ್ತಿ

ಉಡುಪಿಯಲ್ಲಿ ವಿಶೇಷಚೇತನ ಮಕ್ಕಳಿಗಾಗಿ ನಿರ್ಮಿಸಲಿರುವ 'ಸಾಮರ್ಥ್ಯವನ ಪಾರ್ಕ್​'ಗೆ ಲಕ್ಷ್ಮೀ ಹೆಬ್ಬಾಳ್ಕರ್​ ಶಂಕುಸ್ಥಾಪನೆ ನೆರವೇರಿಸಿದರು. ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​, ಹರಿಪ್ರಸಾದ್​ ರೈ ಇತರರಿದ್ದರು.
ಉಡುಪಿಯಲ್ಲಿ ವಿಶೇಷಚೇತನ ಮಕ್ಕಳಿಗಾಗಿ ನಿರ್ಮಿಸಲಿರುವ 'ಸಾಮರ್ಥ್ಯವನ ಪಾರ್ಕ್​'ಗೆ ಲಕ್ಷ್ಮೀ ಹೆಬ್ಬಾಳ್ಕರ್​ ಶಂಕುಸ್ಥಾಪನೆ ನೆರವೇರಿಸಿದರು. ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​, ಹರಿಪ್ರಸಾದ್​ ರೈ ಇತರರಿದ್ದರು.
Published on

* ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅಭಿಪ್ರಾಯ

* ದೇಶದ ಮೊದಲ 'ಸಾಮರ್ಥ್ಯವನ ಪಾರ್ಕ್​'ಗೆ ಶಂಕುಸ್ಥಾಪನೆ

ಉಡುಪಿ: ವಿಶೇಷಚೇತನ ಮಕ್ಕಳೂ ಸಹ ನಮ್ಮ ಸಮಾಜದ ಆಸ್ತಿ. ಅವರಿಗೆ ಅನುಕಂಪ ಬೇಡ. ಅವರಿಗೆ ಸಮಾನ ಅವಕಾಶ ಬೇಕಾಗಿದೆ. ಅವರಿಗೂ ಈ ದೇಶದಲ್ಲಿ ವಿಶೇಷವಾದ ಸ್ಥಾನ&ಮಾನ ಇದೆ ಎನ್ನುವುದನ್ನು ಅರಿವು ಮೂಡಿಸಬೇಕಿದೆ. ಅವರ ಬೆಳವಣಿಗೆ, ಮನರಂಜನೆ ಹಾಗೂ ಸಾಮರ್ಥ್ಯ ವೃದ್ಧಿಸಲು ದೇಶದಲ್ಲೇ ಮೊದಲ ಬಾರಿಗೆ ಉಡುಪಿಯಲ್ಲಿ 'ಸಾಮರ್ಥ್ಯವನ ಪಾರ್ಕ್​' ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಪಂ ವತಿಯಿಂದ ವಿಶೇಷಚೇತನ ಮಕ್ಕಳಿಗಾಗಿ ನಿರ್ಮಿಸಲಿರುವ 'ಸಾಮರ್ಥ್ಯವನ ಪಾರ್ಕ್​' ಕಾಮಗಾರಿಗೆ ಶನಿವಾರ (ಮೇ16) ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
4.90 ಕೋಟಿ ರೂ. ಅನುದಾನ
ವಿಕಲಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗವಕಾಶ ಮತ್ತು ಸ್ವತಂತ್ರ ಜೀವನಕ್ಕೆ ಅನುವು ಮಾಡಿಕೊಡಲು ವಿಶಿಷ್ಟ ರೀತಿಯ ಪಾರ್ಕ್​ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಪ್ರತ್ಯೇಕವಾಗಿ ಸಾಮರ್ಥ್ಯ ಟ್ರಸ್ಟ್​ ರಚಿಸಲಾಗಿದೆ. 1.50 ಕೋಟಿ ರೂ. ಸರ್ಕಾರಿ ಅನುದಾನ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ನೆರವಿನಲ್ಲಿ ಒಟ್ಟು 4.90 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್​ ನಿರ್ಮಾಣವಾಗಲಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ರುದ್ರಣ್ಣ, ರತ್ನಾ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಜೈವಿಠ್ಠಲ್​, ಹರಿಪ್ರಸಾದ್​ ರೈ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲೇ ವೈವಿಧ್ಯಮಯ ಪಾರ್ಕ್​

ಉಡುಪಿ ಜಿಲ್ಲೆಯಲ್ಲಿ 15 ವರ್ಷದೊಳಗಿನ 1,228 ವಿಕಲಚೇತನ ಮಕ್ಕಳಿದ್ದಾರೆ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಈ ಪಾರ್ಕ್​ ಅನುಕೂಲವಾಗಲಿದೆ. ಇಲ್ಲಿ ಥೆರಪಿ ಸ್ವಿಂಗ್ಸ್​ಗಳು, ಬ್ಯಾಲನ್ಸ್​ ಬೀಮ್ಸ್​ಗಳು, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯ ಇರಲಿದೆ. ಅಲ್ಲದೆ, ಹೂಗಳ ಸುವಾಸನೆಯ ವೈವಿಧ್ಯ ಅರಿಯಲು ಸೆನ್ಸೇಶನ್​ ಸೆನ್ಸರಿ ಪಾರ್ಕ್​ ಕೂಡ ಇರಲಿದೆ.
"

ಸಾಮರ್ಥ್ಯವನ ಪಾರ್ಕ್​ ರಾಜ್ಯಕ್ಕಷ್ಟೇ ಅಲ್ಲ, ದೇಶಕ್ಕೆ ಮಾದರಿ ಆಗಬಲ್ಲದು. ಅದನ್ನು 4 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿದ್ದಾರೆ. ಆದರೆ, ಎರಡೇ ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವಂತಾಗಬೇಕು. ನಮ್ಮ ಇಲಾಖೆಯಿಂದಲೂ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು.

— ಲಕ್ಷ್ಮೀ ಹೆಬ್ಬಾಳ್ಕರ್​. ಜಿಲ್ಲಾ ಉಸ್ತುವಾರಿ ಸಚಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net