ಹೊಸ ಮಾಸ್ಟರ್​ ಪ್ಲ್ಯಾನ್ ಕರಡು ಅಧಿಸೂಚನೆ: ಶಾಸಕ ಯಶ್ಪಾಲ್

mla yashpal
ಶಾಸಕ ಯಶ್ಪಾಲ್​ ಸುವರ್ಣ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
Published on: 

ಉಡುಪಿ: ಭವಿಷ್ಯದ ಉಡುಪಿಯನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸ ಮಾಸ್ಟರ್​ ಪ್ಲ್ಯಾನ್ ​ ರೂಪಿಸಲಾಗಿದ್ದು, ಕಳೆದ ಸೆಪ್ಟೆಂಬರ್​ನಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ಒಂದು ತಿಂಗಳು ಮುಂದುವರಿಸಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮಾಸ್ಟರ್​ ಪ್ಲಾನ್​ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರದ 35 ವಾರ್ಡ್​ಗಳು ಮತ್ತು 9 ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕರಡನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಮಹಾಯೋಜನೆಯ ನೂತನ ನಕ್ಷೆಯನ್ನು ಸಾರ್ವಜನಿಕರ ಗಮನಕ್ಕೆ ಒದಗಿಸಬೇಕು. ಮಾಸ್ಟರ್​ ಪ್ಲಾನ್​ನ ಲೇಔಟ್​ ಹಾಗೂ ಮಾಹಿತಿಗಳನ್ನು ಜನರಿಗೆ ಮುಟ್ಟಿಸಿ ಅವರ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಎಂಜಿನಿಯರ್​ಗಳು, ಬಿಲ್ಡರ್​ ಅಸೋಸಿಯೇಶನ್​ ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆದುಕೊಳ್ಳಲಾಗುವುದು ಎಂದರು.

ಮುಂದಿನ 15 ದಿನಗಳಿಂದ ಒಂದು ತಿಂಗಳ ಒಳಗಾಗಿ ಮಾಸ್ಟರ್​ ಪ್ಲಾನ್​ ಕರಡನ್ನು ಅಂತಿಮಗೊಳಿಸಿ, ನಕ್ಷೆಗಳು ಮತ್ತು ರೋಡ್​ ವೈಡಿಂಗ್​ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿರ್ಣಯಗಳು

ಏಕ ನಿವೇಶನ ಮಂಜೂರಾತಿಗೆ ಕರಡು ಮತ್ತು ಅಂತಿಮ ಮಂಜುರಾತಿಯ ಬದಲು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಇದ್ದಂತೆ ಒಂದೇ ಹಂತದಲ್ಲಿ ಅನುಮೋದನೆ ನೀಡಲು ಇಲಾಖೆಯ ಅನುಮತಿ ಪಡೆದು ಕ್ರಮ ವಹಿಸುವ ಬಗ್ಗೆ ಸಭೆಯಲ್ಲಿ ರ್ನಿಣಯಿಸಲಾಯಿತು. ಅಗ್ನಿಶಾಮಕ ಕಡ್ಡಾಯ ನಿರಾಕ್ಷೇಪಣ ಪತ್ರವನ್ನು 21 ಮೀಟರ್​ನಿಂದ 24 ಮೀಟರ್​ ಎತ್ತರಿಸಲು ಸೂಚಿಸಲಾಯಿತು. ಸಭೆಯಲ್ಲಿ ಲಿಖಿತ ರೂಪದ 11 ಅರ್ಜಿ ಸಲ್ಲಿಕೆಯಾಗಿದೆ.

ನಗರಾಭಿವೃದ್ಧಿ ಪಾಧಿಕಾರದ ಸದಸ್ಯೆ ಜ್ಯೋತಿ ಆರ್​. ಹೆಬ್ಬಾರ್​, ಆಯುಕ್ತ ಮಂಜುನಾಥ ಆರ್​., ಟಿಪಿಎಂ ಸಚಿನ್​ ಎಸ್​., ಇಂಜಿನಿಯರ್ಸ್​ ಅಸೋಸಿಯೇಶನ್​ ಅಧ್ಯಕ್ಷ ಭಗವಾನ್​ ದಾಸ್​ ಮೊದಲಾದವರು ಉಪಸ್ಥಿತರಿದ್ದರು.