

ಉಡುಪಿ: ಅಜ್ಜರಕಾಡುವಿನಲ್ಲಿ ನಿಮಾರ್ಣಗೊಂಡಿರುವ ನೂತನ ಜಿಲ್ಲಾಸ್ಪತ್ರೆಯ ಲೋಕಾರ್ಪಣೆ ಬಗ್ಗೆ ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನ. 3 ರಂದು ಬೆಂಗಳೂರಿನಲ್ಲಿ ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಜಿಲ್ಲಾಸ್ಪತ್ರೆ ಪ್ರಾರಂಭಿಸಲು ಅನೇಕ ಮಂದಿ ಒತ್ತಾಯಿಸುತ್ತಿದ್ದಾರೆ. ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಭೆಯಲ್ಲಿ ಆಸ್ಪತ್ರೆಯ ಬಗ್ಗೆ ಚರ್ಚೆ ಮಾಡುತ್ತೇವೆ. ಟೆಂಡರ್ನ ಬಗ್ಗೆ ಗಮನ ಹರಿಸಿ ಹೊಸ ವೈದ್ಯಕಿಯ ಸಲಕರಣೆ ಅಳವಡಿಕೆ, ವೈದ್ಯರು, ಆರೋಗ್ಯ ಸಿಬ್ಬಂದಿ, ಹೆಚ್ಚುವರಿ ಅನುದಾನ ಬಿಡುಗಡೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದರು.
ಜಿಲ್ಲಾ ಮಟ್ಟದ ರಾಜ್ಯೋತ್ಸವಕ್ಕೆ ಮಾನದಂಡ ನಿಗದಿ
ರಾಜ್ಯೋತ್ಸವ ಪ್ರಶಸ್ತಿಯ ಗೌರವ, ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯಕ್ಕೆ ಅನ್ವಯವಾಗುವಂತೆ ಸ್ಪಷ್ಟ ನಿಯಮಾವಳಿ ಸಿದ್ಧಪಡಿಸಿ ಆದೇಶ ಹೊರಡಿಸಲಾಗುತ್ತದೆ. ಈ ಬಗ್ಗೆ ಕನ್ನಡ ಮತ್ತು ಸಂಸತಿ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು. ಯಾವುದೇ ರಾಜಕೀಯ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಶಸ್ತಿ ನೀಡುವುದನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಿಂದ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಮೂವರು ಮಂದಿ ಆಯ್ಕೆಗೊಂಡಿರುವ ವಿಚಾರ ನನಗೆ ಖುಷಿ ಕೊಟ್ಟಿತ್ತು. ಆದರೆ ಕೊನೆಯ ಕ್ಷಣದಲ್ಲಿ ಡಾ.ಜಿ.ಎಸ್.ಚಂದ್ರಶೇಖರ್ ಅವರ ಹೆಸರು ಬಿಟ್ಟಿರುವ ವಿಚಾರ ಗಮನಕ್ಕೆ ಬಂತು. ಈ ಬಗ್ಗೆ ಕನ್ನಡ ಮತ್ತು ಸಂಸತಿ ಇಲಾಖಾ ಸಚಿವರೊಂದಿಗೆ ಮಾತನಾಡುತ್ತೇನೆ. ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದ ರೈತರ ಹಿತವನ್ನು ಕಾಯುವ ನಿಟ್ಟಿನಲ್ಲಿ ಹಾಲಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣಕ್ಕೆ ಹೋಲಿಸಿದರೆ ಹಾಲಿನ ದರ ರಾಜ್ಯದಲ್ಲಿ ಕಡಿಮೆ ಇದೆ. ದರ ಹೆಚ್ಚಳ ಮಾಡದೇ ಹೋದರೆ ಹಾಲು ಹೊರ ರಾಜ್ಯಕ್ಕೆ ನೀಡುವುದಕ್ಕೆ ರೈತರು ಮುಂದಾಗಿದ್ದರು. ಇದರಿಂದ ರಾಜ್ಯದಲ್ಲಿ ಹಾಲಿನ ಅಭಾವ ಎದುರಾಗುತ್ತಿತ್ತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ರೈತರಿಗೆ ಒಳ್ಳೆಯ ಬೆಲೆ ಸಿಗಬೇಕೆನ್ನುವ ಉದ್ದೇಶದಿಂದ ಈ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಅಕ್ರಮ ಬಾಂಗ್ಲಾ ವಲಸಿಗರು ಮತದಾರರ ಪಟ್ಟಿಯಲ್ಲಿ ಸೇರಿದ್ದು, ಅವರನ್ನು ತೆಗೆಯಲು ಈ ಪ್ರಕ್ರಿಯೆ ಎಂದು ಬೊಬ್ಬೆ ಹಾಕಿದ್ದರು. ಬಿಜೆಪಿ ಕೆಲ ನಾಯಕರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಇದನ್ನೇ ಹೇಳಿದ್ದರು. ಆದರೆ ಎಸ್ಐಆರ್ ಪ್ರಕ್ರಿಯೆ ಮುಗಿದಿದೆ. 771 ಮಂದಿ ವಿದೇಶಿಗರನ್ನು ಗುರುತಿಸಲಾಗಿದ್ದು, ಈ ಪೈಕಿ ಅನೇಕರು ನೇಪಾಳಿಗರು. ಸಮಾಜದಲ್ಲಿ ಶಂಕೆಯನ್ನು ಸೃಷ್ಟಿ ಮಾಡಬಾರದು. ಬಿಜೆಪಿ ಈ ದೇಶದ ಪ್ರಜಾಪ್ರಭುತ್ವದ ಮೌಲ್ಯ ಕುಸಿಯುವುದಕ್ಕೆ ಯತ್ನಿಸುತ್ತಿದೆ. ಪ್ರಜಾಪ್ರಭುತ್ವವದ ಉಳಿವಿಗಾಗಿ ನಮ್ಮ ಹೋರಾಟ ಎಂದರು.