ಉಡುಪಿ: ಕಳೆದ ಎರಡು ತಿಂಗಳಿನಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಅಡುಗೆ ಅನಿಲ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಆದರೆ ಕಾಳಸಂತೆಯಲ್ಲಿ ಗ್ಯಾಸ್ ಸಿಗುತ್ತದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಜಿಲ್ಲೆಯ ಗ್ಯಾಸ್ ವಿತರಕ ಏಜೆನ್ಸಿಗಳ ಗ್ಯಾಸ್ ಸರಬರಾಜು ದಾಖಲೆಗಳನ್ನು ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು ಎಂದು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಗೋವಿಂದ ರಾಜ್ ಹೆಗ್ಡೆ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮೇರಿಕಾ&ಇರಾನ್ ಯುದ್ಧ ಪರಿಣಾಮ ಕಳೆದ 2 ತಿಂಗಳಿನಿಂದ ಗ್ಯಾಸ್ ಪೂರೈಕೆಯಾಗಿಲ್ಲ. ಸರ್ಕಾರಕ್ಕೆ ಅತೀ ಹೆಚ್ಚು ಜಿಎಸ್ಟಿ ಪಾವತಿಸುವ ನಮಗೆ ಗ್ಯಾಸ್ ಸಿಗದೇ ಉದ್ಯಮ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ತಿಂಗಳಿಗೆ 30--40 ಸಾವಿರ ಜಿಎಸ್ಟಿ ಪಾವತಿಸುತ್ತೇವೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ವೆಜ್ ರೆಸ್ಟೋರೆಂಟ್ಗಳಿಗೆ ಶೀಘ್ರವೇ ಆದ್ಯತೆ ಮೇರೆಗೆ ಗ್ಯಾಸ್ ಪೂರೈಸಬೇಕು. ಜಿಲ್ಲಾಧಿಕಾರಿಗಳು ಏಜೆನ್ಸಿಗಳ ಗ್ಯಾಸ್ ಸರಬರಾಜು ಮತ್ತು ವಿತರಣೆಯ ಬಗ್ಗೆ ಅಡಿಟ್ ಮಾಡಿ ವಾಸ್ತವಾಂಶವನ್ನು ಸಮಾಜದ ಮುಂದಿಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಡುಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಸಜ್ಜನ್ ಹೆಗ್ಡೆ, ಹಂಸರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.