ಉಡುಪಿ ಜಿಲ್ಲೆಗೆ ನೀಡಿ ಮೆಡಿಕಲ್​ ಕಾಲೇಜು

ಬೆಂಗಳೂರಿನ ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಯಶ್​ಪಾಲ್​ ಸುವರ್ಣ ಮಾತನಾಡಿದರು.
ಬೆಂಗಳೂರಿನ ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಯಶ್​ಪಾಲ್​ ಸುವರ್ಣ ಮಾತನಾಡಿದರು.
Published on

* ಅಧಿವೇಶನದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ 

ಉಡುಪಿ: ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜ್​ ಮಂಜೂರು ಮಾಡುವಂತೆ ಗುರುವಾರ (ಮಾ.12) ಬೆಂಗಳೂರಿನ ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಚುಕ್ಕೆ ಗುರುತಿನ ಪ್ರಶ್ನೆಯಡಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಾಗಿ 29 ವರ್ಷ ಗತಿಸಿದೆ. ಮೆಡಿಕಲ್​ ಕಾಲೇಜ್​ ಬೇಕೆನ್ನುವುದು ಜಿಲ್ಲೆಯ ಜನರ ಹಲವು ದಶಕಗಳ ಕನಸಾಗಿದೆ. ಜಿಲ್ಲೆಯಲ್ಲಿ ಮೆಡಿಕಲ್​ ಕಾಲೇಜು ನಿಮಾರ್ಣಗೊಂಡರೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಲ ಲಭಿಸಲಿದೆ. ಜನರಿಗೂ ಸಮೀಪದಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಲಭಿಸುವುದಲ್ಲದೆ, ಆಸಕ್ತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಉಪ್ಪೂರಿನಲ್ಲಿದೆ ಸೂಕ್ತ ಜಾಗ

ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ಮೆಡಿಕಲ್​ ಕಾಲೇಜು ನಿರ್ಮಾಣಕ್ಕೆ ಅನುಕೂಲವಾದ ಸರ್ಕಾರಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಉಪ್ಪೂರು ಗ್ರಾಮದ ಸರ್ವೆ ನಂಬರ್​ 293/1ಎ 1ರಲ್ಲಿ 18.80 ಎಕರೆ ಮತ್ತು 232ರಲ್ಲಿ 12 ಎಕರೆ ಜಾಗ ಈಗಾಗಲೇ ಕಾಯ್ದಿರಿಸಲಾಗಿದೆ. ಅಗತ್ಯ ಮೂಲಸೌಕರ್ಯದೊಂದಿಗೆ ಮೆಡಿಕಲ್​ ಕಾಲೇಜ್​ ನಿರ್ಮಿಸಲು ಅತ್ಯಂತ ಅನುಕೂಲಕರ ಹಾಗೂ ಸೂಕ್ತ ಜಾಗವಾಗಿದೆ ಎಂದರು.

ತ್ವರಿತ ಅನುಮೋದನೆ ನೀಡಿ

ರಾಜ್ಯದ ಅನೇಕ ಜಿಲ್ಲೆಗಳು ಸರ್ಕಾರಿ ಮೆಡಿಕಲ್​ ಕಾಲೇಜ್​ ಹೊಂದಿದೆ. ಕಳೆದ ಬಜೆಟ್​ನಲ್ಲಿ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜ್​ ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್​ ಕಾಲೇಜ್​ ನಿರ್ಮಿಸುವುದಾಗಿ ಘೋಷಿಸಿದ್ದು, ಮಹತ್ವಾಕಾಂಕ್ಷಿ ಯೋಜನೆಯನ್ನು ಉಡುಪಿ ಜಿಲ್ಲೆಗೂ ನೀಡಬೇಕು. ರಾಜ್ಯ ಸರ್ಕಾರ ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಿ ತ್ವರಿತವಾಗಿ ಆಡಳಿತಾತ್ಮಕ ಅನುಮತಿ ಮತ್ತು ಅಗತ್ಯ ಅನುದಾನ ಮೀಸಲಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಯಶ್​ಪಾಲ್​ ಮನವಿ ಮಾಡಿದರು.
ಶಾಸಕ ಯಶ್​ಪಾಲ್​ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಶರಣ ಪ್ರಕಾಶ್​ ಪಾಟೀಲ್​, ಪ್ರತಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ಸ್ಥಾಪನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಉಡುಪಿ ಜಿಲ್ಲೆಗೂ ಸಹ ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ಮಂಜೂರಾತಿ ಮಾಡಲು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net