ಎಂಡಿಎಂಎ ಸಾಗಾಟ, ಆರೋಪಿ ಬಂಧನ

Crime
Crime
Published on

ಕಾಸರಗೋಡು: ‘ಆಪರೇಷನ್ ಥಂಡರ್’ ಅನ್ವಯ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 2.14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಲಾಗಿದೆ. ಚೆರ್ಕಳ ಸಮೀಪದ ತೆಕ್ಕಿಲ್ ಚೆರುಗರ ನಿವಾಸಿ ಅಬೂಬಕರ್ ಸಿದ್ದಿಕ್(33) ಬಂಧಿತ.

ಸಾಗಾಟಕ್ಕೆ ಬಳಸಿದ್ದ ಬೈಕನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಚೆಮ್ಮಟಮ್ವಯಲ್‌ನಲ್ಲಿ ಹೊಸದುರ್ಗ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಸಿ.ಎಚ್.ನಸೀಬ್ ನೇತೃತ್ವದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ಪಿಎಫ್‌ಐ ಮುಖಂಡ ಯಾಸರ್ ಅರಾಫತ್ ಸಾವು

ಪಾಲಕ್ಕಾಡಿನ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ ಕೊಲೆ ಪ್ರಕರಣದ ಆರೋಪಿ, ನಿಷೇಧಿತ ಸಂಟನೆ ಪಾಪ್ಯುಲರ್ ಫ್ರಂಟ್ (ಪಿಎಫ್‌ಐ) ನೇತಾರ ಯಾಸರ್ ಅರಾಫತ್ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ವಿಯೂರು ಅತಿ ಸುರಕ್ಷಿತ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಬಳಿಕ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಯಾಸರ್ ಅರಾಫತ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಆರೋಪಿಗಳ ಪೈಕಿ ಕಸ್ಟಡಿಯಲ್ಲಿದ್ದಾಗ ಸಾವಿಗೀಡಾದ ಎರಡನೇ ವ್ಯಕ್ತಿ ಅರಫಾಸ್ ಆಗಿದ್ದಾರೆ. ಈ ಹಿಂದೆ ಆರೋಪಿ ನಿಸಾರ್ ಎಂಬಾತ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕ್ಯಾನ್ಸರ್ ರೋಗ ಉಲ್ಬಣಗೊಂಡು ಮೃತಪಟ್ಟಿದ್ದ.

ವಿದೇಶಕ್ಕೆ ಪರಾರಿಯಾಗಲೆತ್ನಿಸಿದ ಆರೋಪಿ ಬಂಧನ

ಗಲಾಟೆ ಪ್ರಕರಣದಲ್ಲಿ ಬಂಧಿತನಾಗಿದ್ದ ಯುವಕನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಕರೆದುಕೊಂಡು ಹೋಗಿ ಬಳಿಕ ಆತನನ್ನು ಕೊಲೆಗೈದ ಪ್ರಕರಣಕ್ಕೆ ಸಬಂಧಿಸಿ ಕುಂಜತ್ತೂರು ಕಣ್ಣತೀರ್ಥ ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಸಿನಾನ್(26) ಎಂಬಾತನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2024, ಮಾರ್ಚ್ 3ರಂದು ರಾತ್ರಿ ಗಲಾಟೆ ನಡೆಸಿದ ಆರೋಪದ ಮೇಲೆ ಮಂಜೇಶ್ವರ ಪೊಲೀಸರು ಮೊಯ್ದೀನ್ ಆರಿಫ್ (22)ನನ್ನು ಬಂಧಿಸಿದ್ದರು. ನಂತರ ಆರಿಫ್‌ನನ್ನು ಸಂಬಂಧಿಕರೊಬ್ಬರು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ಮೊಯ್ದೀನ್ ಆರಿಫ್ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಬಿಂಬಸಲಾಗಿತ್ತು. ಆದರೆ ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳಾದ ಶೌಕತ್ ಆಲಿ, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಶೀದ್ ಎಂಬುವರನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿ ಆರೋಪಿಗಳಿದ್ದು, ಉಳಿದ ಆರೋಪಿಗಳಿಗಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಮಧ್ಯೆ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ ಆರೋಪಿ ಅಬ್ದುಲ್ ರಹಿಮಾನ್ ಸಿನಾನ್‌ನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ವ್ಯಾಪಾರಿ ನಾಪತ್ತೆ

ಕುಂಬ್ಡಾಜೆಯ ಮಾರ್ಪನಡ್ಕ ಹೌಸ್‌ನ ಮುಹಮ್ಮದ್ ಅಜೀಫ್(22) ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆ.15ರಂದು ಬೆಳಗ್ಗೆ 11ಕ್ಕೆ ಮನೆಯಿಂದ ಹೊರಟವರು ನಂತರ ಹಿಂತಿರುಗಿಲ್ಲ ಎಂದು ಅವರ ತಾಯಿ ಸುಬೈದಾ ಬದಿಯಡ್ಕ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಮ್ಮದ್ ಅಜೀಫ್ ಈ ಹಿಂದೆ ನಾಯಮರ್‌ಮೂಲೆಯಲ್ಲಿ ಅಂಗಡಿ ನಡೆಸುತ್ತಿದ್ದು ಭಾರಿ ಸಾಲ ಹೊಂದಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net