ಆಂಧ್ರ ಪ್ರದೇಶದ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್ ಮಾತನಾಡಿ, ಭಾರತದಲ್ಲಿ ನಾವೆಲ್ಲರೂ ಒಂದೇ. ಜವಾಬ್ದಾರಿ ಹಾಗೂ ಸಹಕಾರದಿಂದ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಭಾರತದ ಸಂಸ್ಕೃತಿ, ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠ. 800 ವರ್ಷದಿಂದ ಉಡುಪಿಯು ಶ್ರೀಕೃಷ್ಣನ ಆರಾಧನೆ, ಗೀತಾ ಸಂದೇಶದ ಮೂಲಕ ಸೌಹಾರ್ದತೆ ಮೂಡಿಸುತ್ತಲಿದೆ. ಇಲ್ಲಿನ ಎಲ್ಲ ಅಷ್ಟ ಮಠಗಳೂ ಸಹ ಅದೇ ಕೈಂಕರ್ಯ ಮುಂದುವರಿಸಿದೆ. ಪುತ್ತಿಗೆ ಶ್ರೀಗಳು ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಗೀತಾ ಸಂದೇಶದ ಮೂಲಕ ಸೌಹಾರ್ದತೆ ಸಾರುತ್ತಿದ್ದಾರೆ. ಉಡುಪಿಯೆಂದರೆ ನಗರವಲ್ಲ, ಅದೊಂದು ಜೀವಂತ ಪರಂಪರೆ. ವೇದಗಳು ಕೇವಲ ಧಾರ್ಮಿಕ ಗ್ರಂಥವಷ್ಟೇ ಅಲ್ಲ. ಅದು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ. ಅದು ಜಗತ್ತಿಗೆ ಸೇರಿದ ಗ್ರಂಥ. ಸೂರ್ಯ, ಮಳೆ, ಮಣ್ಣು, ನದಿ, ಪರಿಸರ ವ್ಯವಸ್ಥೆ ಇವೆಲ್ಲವೂ ಸಹ ಎಲ್ಲರಿಗೂ ಬೇಕಾಗಿರುವ ಪ್ರಕೃತಿದತ್ತ ಕೊಡುಗೆ. ಅವುಗಳನ್ನೆಲ್ಲ ರಕ್ಷಿಸಿ, ಸೌಹಾರ್ದತೆಯಿಂದ ಬದುಕಬೇಕಿದೆ. ಸ್ವಾರ್ಥವಿಲ್ಲದೆ ಕರ್ತವ್ಯ, ಅನ್ಯರಿಗೆ ನೆರವು ಮತ್ತು ಗೌರವ, ನಿಸರ್ಗ ಪೂರಕವಾಗಿ ಬದುಕುವವನೇ ಮಾನವೀಯತೆಯ ನೈಜ ಮಿತ್ರ. ಗೀತೆಯ ಅನುಸರಣೆಯಿಂದ ಎಲ್ಲೆಡೆ ಶಾಂತಿ ನೆಲೆಸಲಿದೆ ಎಂದರು.