ವಿಶ್ವದಲ್ಲಿ ಮತ್ತೊಮ್ಮೆ ಮೊಳಗಲಿ ಶ್ರೀಕೃಷ್ಣನ ಶಂಖನಾದ

ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಶಾಂತಿ ಸಮ್ಮೇಳನವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು.  ಸುಶ್ರಿಂದ್ರ ಶ್ರೀ, ಸೈಯದ್​ ಅಬ್ದುಲ್​ ನಜೀರ್​, ಸದ್ಗುರು ಶ್ರೀ ಮಧುಸೂದನ ಸಾಯಿ, ಡಾ. ವಿಲಿಯಂ ಎಫ್​. ವೆಂಡ್ಲಿ, ಪ್ರಸನ್ನ ಆಚಾರ್ಯ, ಸುರೇಶ್​ ಪುತ್ತಿಗೆ, ಕವಿತಾ ಪಾಲಿಮಾರ್​, ಡಾ.ಚೂಡಾಮಣಿ ನಂದಗೋಪಾಲ್​, ಡಾ.ಅರುಣಾ ಕೆ.ಆರ್​. ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಶಾಂತಿ ಸಮ್ಮೇಳನವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರಿಂದ್ರ ಶ್ರೀ, ಸೈಯದ್​ ಅಬ್ದುಲ್​ ನಜೀರ್​, ಸದ್ಗುರು ಶ್ರೀ ಮಧುಸೂದನ ಸಾಯಿ, ಡಾ. ವಿಲಿಯಂ ಎಫ್​. ವೆಂಡ್ಲಿ, ಪ್ರಸನ್ನ ಆಚಾರ್ಯ, ಸುರೇಶ್​ ಪುತ್ತಿಗೆ, ಕವಿತಾ ಪಾಲಿಮಾರ್​, ಡಾ.ಚೂಡಾಮಣಿ ನಂದಗೋಪಾಲ್​, ಡಾ.ಅರುಣಾ ಕೆ.ಆರ್​. ಇತರರಿದ್ದರು.
Published on

*ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ

* ಉಡುಪಿಯಲ್ಲಿ 'ವಿಶ್ವ ಶಾಂತಿ ಸಮ್ಮೇಳನ' ಉದ್ಘಾಟನೆ

ಉಡುಪಿ: ಧರ್ಮ ಸಂಸ್ಥಾಪನೆಯೊಂದಿಗೆ ವಿಶ್ವದಲ್ಲಿ ಶಾಂತಿ ನೆಲೆಸಲು ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನು ಪಾಂಚಜನ್ಯ ಮೊಳಗಿಸಿದ್ದನು. ಇದೀಗ ವಿಶ್ವದೆಲ್ಲೆಡೆ ಯುದ್ಧ ಭೀತಿ, ಅಶಾಂತಿ, ದುಷ್ಕೃತ್ಯ ಹೆಚ್ಚುತ್ತಲಿದ್ದು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಿಂದ ವಿಶ್ವಶಾಂತಿ ಮೊಳಗಬೇಕಿದೆ. ಸಜ್ಜನರು ಯಾವುದೇ ಪಂಗಡದಲ್ಲಿದ್ದರೂ ರಕ್ಷಣೆ ಆಗಬೇಕು. ದುಷ್ಟರು ಯಾವುದೇ ಪಂಗಡದಲ್ಲಿದ್ದರೂ ಶಿಕ್ಷೆ ಆಗಲೇಬೇಕು. ಸಂಕುಚಿತ ಚಿಂತನೆಯಡಿ ಸಾಗುತ್ತಿರುವ ವಿಶ್ವಕ್ಕೆ ಶ್ರೀಕೃಷ್ಣನ ಶಂಖನಾದದ ಧ್ವನಿ ಮತ್ತೊಮ್ಮೆ ಕೇಳಬೇಕಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶನಿವಾರ (ಡಿ.13) ಆಯೋಜಿಸಿದ್ದ 'ವಿಶ್ವ ಶಾಂತಿ ಸಮ್ಮೇಳನ-2025' ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕುರುಡು ವ್ಯಾಮೋಹ

ನಾನು, ನನ್ನ ಕುಟುಂಬ ಮಾತ್ರ ಎಂಬ ಸ್ವಾರ್ಥ ಹೆಚ್ಚುತ್ತಿದೆ. ನಾನೇ ಶ್ರೇಷ್ಠ ಎಂಬ ಮನೋಭಾವ ಮಕ್ಕಳಲ್ಲೂ ಕಂಡುಬರುತ್ತಿದೆ. ನಾನು ಎಂಬ ಅಂಹಕಾರವೇ ಹಿಂದೆ ನಡೆದ ಎಲ್ಲ ಯುದ್ಧಗಳಿಗೂ ಕಾರಣ. ಸೌಹಾರ್ದ, ವಿಶ್ವಾಸ, ವಿನಯದಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ತನ್ನ ಪುತ್ರನ ಕುರಿತಾಗಿ ಧೃತರಾಷ್ಟ್ರನ ಕುರುಡು ವ್ಯಾಮೋಹವೇ ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು. ಮಧ್ವಾಚಾರ್ಯರ 'ದಾಸೋಹಂ' ತತ್ವದಂತೆ ಸೀಮಾರಹಿತ ಚಿಂತನೆಯಿಂದ ವಿಶ್ವದಲ್ಲಿ ಶಾಂತಿ ತಲೆ ಎತ್ತಲು ಸಾಧ್ಯ. 'ಸತ್ಯಂ ಶಿವಂ ಸುದರಂ' ಎಂಬ ಸಂದೇಶವನ್ನು ಈ ಸಮ್ಮೇಳನವು ವಿಶ್ವಕ್ಕೆ ತಿಳಿಯಪಡಿಸುತ್ತದೆ ಎಂದು ಸುಗುಣೇಂದ್ರ ಶ್ರೀ ಹೇಳಿದರು.

ಎಲ್ಲರನ್ನೂ ಗೌರವಿಸಿ

 ಅಮೆರಿಕದ 'ವಿಶ್ವ ಶಾಂತಿಗಾಗಿ ಧರ್ಮ'ದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವಿಲಿಯಂ ಎಫ್​. ವೆಂಡ್ಲಿ ಮಾತನಾಡಿ, ಸುತ್ತಮುತ್ತಲೂ ಇರುವ ಎಲ್ಲರನ್ನೂ ಗೌರವಿಸಬೇಕು. ಇದುವೇ ವಿಶ್ವ ಶಾಂತಿಯ ಮೂಲ ಮಂತ್ರ. ನಮ್ಮೊಂದಿಗೆ ಇತರರನ್ನೂ ಪ್ರೀತಿಸದರೆ ಅದುವೇ ವಿಶ್ವ ಶಾಂತಿ. ಮಾನವೀಯತೆಯ ನಾಶವೇ ಅಶಾಂತಿಗೆ ಕಾರಣವಾಗಿದೆ. ನಾನು 100ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಜನರ ಆಚಾರ&ವಿಚಾರ, ಸಂಸ್ಕೃತಿ ಎಲ್ಲವನ್ನೂ ಅರಿತಿದ್ದೇನೆ. ಶಸ್ತ್ರದಿಂದ ವಿಶ್ವದಲ್ಲಿ ಶಾಂತಿ ನೆಲೆಸದು. ಅದಕ್ಕಾಗಿ ಧರ್ಮವನ್ನೂ ಬದಲಿಸಬೇಕಿಲ್ಲ. ಯುಕ್ತಿಯಿಂದ, ಮಾನವೀಯತೆಯಿಂದ, ಪರಸ್ಪರ ಗೌರವ ಭಾವನೆಯಿಂದ ಎಲ್ಲೆಡೆ ಶಾಂತಿ ನೆಲೆಸಲಿದೆ. ಅಂತಿಮವಾಗಿ ಶಾಂತಿಯೇ ಪ್ರಪಂಚದ ಶಕ್ತಿಯಾಗಿದೆ. ಭಾರತವು ಶಾಂತಿಪ್ರಿಯ ದೇಶ ಎಂದರು.

ಪುಸ್ತಕ ಬಿಡುಗಡೆ

ಸುಗುಣೇಂದ್ರ ತೀರ್ಥ ಶ್ರೀಪಾದರ 'ಸರ್ವಮೂಲ ಭಾವ ಪರಿಚಯ' ಹಾಗೂ ಡಾ.ಚೂಡಾಮಣಿ ನಂದಗೋಪಾಲ್​ ಮತ್ತು ಡಾ.ಅರುಣಾ ಕೆ.ಆರ್​. ವಿರಚಿತ 'ಉಡುಪಿ ಶ್ರೀಕೃಷ್ಣ ಮಠ' ದೇವಾಲಯದ ಸಂಸ್ಕೃತಿ ಸಿರಿ (ಕನ್ನಡ ಹಾಗೂ ಇಂಗ್ಲಿಷ್​), ಗೀತಾಮೃತ ಸಾರ (ಚತುರ್ಥ ಮುದ್ರಣ) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 
ಸುರೇಶ್​ ಪುತ್ತಿಗೆ (ಯುಎಸ್​ಎ), ಕವಿತಾ ಪಾಲಿಮಾರ್​, ದಿವ್ಯಶ್ರೀ ಮಂಜುನಾಥ್​ (ಯುಎಸ್​ಎ), ಅರುಣಾ ಕೆ.ಆರ್​., ಡಾ.ಬಿ.ನರಸಿಂಹ ಮೂರ್ತಿ, ಗೋಮತಿನಾಥನ್​, ಕೇಶವ್​ ರಾಜ್​ ಉಪಸ್ಥಿತರಿದ್ದರು.
ಪ್ರೊ.ಸುಧೀರ್​ ರಾಜ್​ ಕೆ. ವಂದಿಸಿದರು. ರೋಹಿತ್​ ಚಕ್ರತಿರ್ಥ ಕಾರ್ಯಕ್ರಮ ನಿರೂಪಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಸಹಕರಿಸಿದರು.

ಉಡುಪಿ ನಗರವಲ್ಲ, ಜೀವಂತ ಪರಂಪರೆ

 ಆಂಧ್ರ ಪ್ರದೇಶದ ರಾಜ್ಯಪಾಲ ಸೈಯದ್​ ಅಬ್ದುಲ್​ ನಜೀರ್​ ಮಾತನಾಡಿ, ಭಾರತದಲ್ಲಿ ನಾವೆಲ್ಲರೂ ಒಂದೇ. ಜವಾಬ್ದಾರಿ ಹಾಗೂ ಸಹಕಾರದಿಂದ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಭಾರತದ ಸಂಸ್ಕೃತಿ, ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠ. 800 ವರ್ಷದಿಂದ ಉಡುಪಿಯು ಶ್ರೀಕೃಷ್ಣನ ಆರಾಧನೆ, ಗೀತಾ ಸಂದೇಶದ ಮೂಲಕ ಸೌಹಾರ್ದತೆ ಮೂಡಿಸುತ್ತಲಿದೆ. ಇಲ್ಲಿನ ಎಲ್ಲ ಅಷ್ಟ ಮಠಗಳೂ ಸಹ ಅದೇ ಕೈಂಕರ್ಯ ಮುಂದುವರಿಸಿದೆ. ಪುತ್ತಿಗೆ ಶ್ರೀಗಳು ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಗೀತಾ ಸಂದೇಶದ ಮೂಲಕ ಸೌಹಾರ್ದತೆ ಸಾರುತ್ತಿದ್ದಾರೆ. ಉಡುಪಿಯೆಂದರೆ ನಗರವಲ್ಲ, ಅದೊಂದು ಜೀವಂತ ಪರಂಪರೆ. ವೇದಗಳು ಕೇವಲ ಧಾರ್ಮಿಕ ಗ್ರಂಥವಷ್ಟೇ ಅಲ್ಲ. ಅದು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ. ಅದು ಜಗತ್ತಿಗೆ ಸೇರಿದ ಗ್ರಂಥ. ಸೂರ್ಯ, ಮಳೆ, ಮಣ್ಣು, ನದಿ, ಪರಿಸರ ವ್ಯವಸ್ಥೆ ಇವೆಲ್ಲವೂ ಸಹ ಎಲ್ಲರಿಗೂ ಬೇಕಾಗಿರುವ ಪ್ರಕೃತಿದತ್ತ ಕೊಡುಗೆ. ಅವುಗಳನ್ನೆಲ್ಲ ರಕ್ಷಿಸಿ, ಸೌಹಾರ್ದತೆಯಿಂದ ಬದುಕಬೇಕಿದೆ. ಸ್ವಾರ್ಥವಿಲ್ಲದೆ ಕರ್ತವ್ಯ, ಅನ್ಯರಿಗೆ ನೆರವು ಮತ್ತು ಗೌರವ, ನಿಸರ್ಗ ಪೂರಕವಾಗಿ ಬದುಕುವವನೇ ಮಾನವೀಯತೆಯ ನೈಜ ಮಿತ್ರ. ಗೀತೆಯ ಅನುಸರಣೆಯಿಂದ ಎಲ್ಲೆಡೆ ಶಾಂತಿ ನೆಲೆಸಲಿದೆ ಎಂದರು.
"

 ಐಕಮತ್ಯ, ಸಹಮತ, ವಸುದೈವ ಕುಟುಂಬಕಂ ಎಂಬ ನಿಲುವಿನಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪುತ್ತಿಗೆ ಶ್ರೀಗಳು ವಿಶ್ವದಲ್ಲಿ ಶಾಂತಿ ನೆಲೆಸಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಶ್ರೀಕೃಷ್ಣ ಸನ್ನಿಧಿಯಲ್ಲಿ ವಿಶ್ವ ಶಾಂತಿ ಸಮ್ಮೇಳನ ನಡೆದಿರುವುದು ಅರ್ಥಪೂರ್ಣ. ಇಂದಿನ ಶೈಕ್ಷಣಿಕ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ಸುಲಭವಾಗಿ ಎಲ್ಲೆಡೆ ಶಾಂತಿ ನೆಲೆಸಲಿದೆ. ಮನೆಮನೆಯಲ್ಲೂ ಭಗವದ್ಗೀತೆ ಇರಬೇಕು. ಅದರ ಅನುಸರಣೆ ಆಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net