ಆಭರಣ, ಹಣಕ್ಕೆ ಗರಿಷ್ಠ ಮಟ್ಟದ ಭದ್ರತೆ

 ಉಳ್ಳಾಲ ದರ್ಗಾ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಜನಜಾಗೃತಿ ಸಭೆಯಲ್ಲಿ ಎಎಸ್‌ಐ ರೇವಣ್ಣ ಸಿದ್ದಪ್ಪ ಮಾತನಾಡಿದರು.
ಉಳ್ಳಾಲ ದರ್ಗಾ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಜನಜಾಗೃತಿ ಸಭೆಯಲ್ಲಿ ಎಎಸ್‌ಐ ರೇವಣ್ಣ ಸಿದ್ದಪ್ಪ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ


ಇತ್ತೀಚಿನ ದಿನಗಳಲ್ಲಿ ದರೋಡೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಮೌಲ್ಯವುಳ್ಳ ಆಭರಣ, ಹಣ, ಸ್ವತ್ತು ಇದ್ದರೆ ಗರಿಷ್ಟ ಮಟ್ಟದ ಭದ್ರತೆಯೂ ಇರಬೇಕು ಎಂದು ಉಳ್ಳಾಲ ಪಿಎಸ್‌ಐ ರೇವಣ್ಣ ಸಿದ್ದಪ್ಪ ಸಲಹೆ ನೀಡಿದ್ದಾರೆ.

ಉಳ್ಳಾಲ ದರ್ಗಾ ಕಚೇರಿಯ ಆವರಣದಲ್ಲಿ ಶನಿವಾರ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಣ್ಣಪುಟ್ಟ ಕಳ್ಳತನದ ಜತೆಗೆ ದೇವಸ್ಥಾನವೊಂದರಿಂದ ನಾಲ್ಕು ಲಕ್ಷ ರೂ. ಮೌಲ್ಯದ ಆಭರಣ ಕಳವಾಗಿದೆ. ದೇವಸ್ಥಾನದಲ್ಲಿ ನಾಲ್ಕರಿಂದ ಐದು ಲಕ್ಷ ರೂ.ಮೌಲ್ಯದ ಆಭರಣಗಳಿದ್ದರೂ ಕೇವಲ 20ರೂ. ಮೌಲ್ಯದ ಬೀಗ ಹಾಕಲಾಗಿತ್ತು. ಸಿಸಿಟಿವಿಯಂತೂ ಇಲ್ಲವೇ ಇಲ್ಲ.
ಮನೆ, ಮಂದಿರಗಳಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳಿದ್ದರೆ ಕನಿಷ್ಟ 20 ಸಾವಿರ ರೂ.ಮೌಲ್ಯದ ಸಿಸಿಟಿವಿ ಅಳವಡಿಸಲು ಹಿಂದೇಟು ಹಾಕುತ್ತಾರೆ. ಬ್ಯಾಂಕ್‌ಗೆ ಭದ್ರತೆ ಇರುವ ಕಾರಣ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಬಹಳಷ್ಟು ಕಡೆ ಒಳ್ಳೆಯ ಲಾಕರ್ ಸೌಲಭ್ಯವೂ ಇಲ್ಲ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಅಪರಾಧ ಸಂಭವಿಸುವುದಕ್ಕೆ ಮುಂಚಿತವಾಗಿ ಭದ್ರತೆ ಮಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಕೇರಳ-ಕರ್ನಾಟಕ ಗಡಿಭಾಗ ಕೆದಂಬಾಡಿ ಪರಿಸರದ ಮನೆಯೊಂದರ ಸುತ್ತ ನಾಲ್ಕು ಮಂದಿ ಮುಸುಕುಧಾರಿಗಳು ಗುರುವಾರ ತಡರಾತ್ರಿ ಮಾಸ್ಕ್ ಧರಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ದರೋಡೆಗೆ ಹೊಂಚು ಹಾಕಿದವರ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಎಚ್ಚರ ವಹಿಸುವಂತೆ ಮಂಜೇಶ್ವರ, ತಲಪಾಡಿ, ಉಳ್ಳಾಲ, ಕೆ.ಸಿ.ರೋಡ್, ದೇರಳಕಟ್ಟೆ, ತೊಕ್ಕೊಟ್ಟು, ಕೊಣಾಜೆ, ಮುಡಿಪು ಮೊದಲಾದ ಪರಿಸರದ ಜನರು ಜಾಗೃತರಾಗಿರಬೇಕು ಎಂದರು.

ನಾಯಿ ಸತತವಾಗಿ ಬೊಗಳಿದ ಕಾರಣ ಮನೆ ಯಜಮಾನ ಎಚ್ಚೆತ್ತುಕೊಂಡಿದ್ದು ಇದರಿಂದಾಗಿ ದರೋಡೆಗೆ ಬಂದವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮನೆಯೊಳಗಡೆ ಕಂಪೌಂಡ್‌ನಲ್ಲಿ ಆಟೋರಿಕ್ಷಾ ಇದ್ದು ಹೊರಗಡೆ ಏಸ್ ಟೆಂಪೋ ಪಾರ್ಕ್ ಮಾಡಲಾಗಿತ್ತು. ನಾಯಿ ಪದೇಪದೆ ಬೊಗಳುತ್ತಿದ್ದರೂ ಆರೋಪಿಗಳು ಕಾಂಪೌಂಡ್ ಹೊರಗಡೆಯಿಂದ ಟೆಂಪೋ ನಿಲ್ಲಿಸಿದ್ದಲ್ಲಿಂದಲೇ ಸಾಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುವುದರಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net