ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಗಣಿತ ಶಿಕ್ಷಕರ ಸಮ್ಮೇಳನವನ್ನು ಡಾ. ಚಂದ್ರಕಲಾ ಸಿ.ಬಿ. ಉದ್ಘಾಟಿಸಿದರು. ಮಾರುತಿ, ಡಾ. ಸುಧಾ ಕಾಮತ್, ಡಾ. ಬಾಲಕೃಷ್ಣ ಮದ್ದೋಡಿ, ಡಾ. ಉದಯಕುಮಾರ್, ಸುಧೀರ್ ಪ್ರಭು, ದೀಪಕ್ರಾಜ್, ಬಾಬು ಶ್ರೀನಿವಾಸ ಇತರರಿದ್ದರು.
ಉಡುಪಿ: ಕೋವಿಡ್ ಬಳಿಕ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನದಲ್ಲಿ ಭಾರಿ ಏರಿಳಿತವಾಗಿದೆ. ಅಲ್ಲದೆ, ಡಿಜಿಟಲ್ ರೂಪಾಂತರವು ಶಿಕ್ಷಕರ ಮನಸ್ಸು, ಮನೋಭಾವದ ಮೇಲೂ ಪರಿಣಾಮ ಬೀರಿದೆ. ಗಣಿತವಿಲ್ಲದೆ ಕಂಪ್ಯೂಟರ್ ವಿಜ್ಞಾನಕ್ಕೆ ಅಸ್ತಿತ್ವವಿಲ್ಲ. ನಿತ್ಯ ಜೀವನದಲ್ಲಿ ಗಣಿತ ಹಾಸುಹೊಕ್ಕಾಗಿದ್ದು ತಾರ್ಕಿಕ ಚಿಂತನೆ ಅಗತ್ಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಜಂಟಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ಅಭಿಪ್ರಾಯಪಟ್ಟರು.
ಮಣಿಪಾಲ ಎಂಐಟಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ.ಪೂ.), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ ವಿವಿ), ಎಂಐಟಿ ಎನ್ಎಸ್ಎಸ್ ಘಟಕಗಳ ವತಿಯಿಂದ ಹಾಗೂ ಉಡುಪಿ ಜಿಲ್ಲಾ ಗಣಿತ ಉಪನ್ಯಾಸಕರ ವೇದಿಕೆ ಸಹಕಾರದಲ್ಲಿ ಸೋಮವಾರ (ಜೂ.22) ಆಯೋಜಿಸಿದ್ದ ಗಣಿತ ಶಿಕ್ಷಕರ ಸಮ್ಮೇಳನ (ಗಣಿತದಲ್ಲಿ ಸುಧಾರಿತ ಎಐ ಪರಿಕರ ಮತ್ತು ತಂತ್ರಜ್ಞಾನ ಕುರಿತ ಕಾರ್ಯಾಗಾರ) ಉದ್ಘಾಟಿಸಿ ಮಾತನಾಡಿದರು.
ಇಂಜನಿಯರಿಂಗ್ ಶಿಕ್ಷಣ ಉಚಿತ
ಎಂಐಟಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಮದ್ದೋಡಿ ಮಾತನಾಡಿ, ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 8ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ಅವಧಿಯಲ್ಲಿ ಜಿಪಂ ವತಿಯಿಂದ ಸಿಇಟಿ, ಜೆಇಇ ಪರೀಕ್ಷೆ ತಯಾರಿಗಾಗಿ ತರಬೇತಿ ನೀಡಲಾಗುತ್ತಿದೆ. ಎಂಐಟಿಯ ಪ್ರವೇಶ ಪರೀಕ್ಷೆ ಬರೆದು 15 ಸಾವಿರದೊಳಗೆ ರ್ಯಾಂಕ್ ಪಡೆದರೆ ಇಂಜಿನಿಯರಿಂಗ್ ಶಿಕ್ಷಣ ಉಚಿತವಾಗಿ ನೀಡಲಾಗುವುದು ಎಂದರು.
ಜಗತ್ತು ಅರಿಯುವ ಕೀಲಿಕೈ
ಎಂಐಟಿಯ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮ್ಯಾನಿಟೀಸ್ ಆ್ಯಂಡ್ ಮೆನೇಜ್ಮೆಂಟ್ನ ಡೀನ್ ಡಾ. ಸುಧಾ ಕಾಮತ್ ಮಾತನಾಡಿ, ಗಣಿತ ಜ್ಞಾನವು ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿದೆ. ಅದು ಜ್ಞಾನ ಜಗತ್ತು ಅರಿತುಕೊಳ್ಳುವ ಕೀಲಿಕೈ. ಗಣಿತ ಉಪನ್ಯಾಸಕರು ಕ್ರಿಪ್ಟೋಗ್ರಫಿ, ಕೃತಕ ಬುದ್ಧಿಮತ್ತೆ ಮೂಲಕ ವಿದ್ಯಾರ್ಥಿಗಳ ಚಿಂತನೆಗೆ ಪ್ರೇರಣೆ ನೀಡಬೇಕು ಎಂದರು.
ಗೌರವ ಸನ್ಮಾನ
ಅಧ್ಯಕ್ಷತೆ ವಹಿಸಿದ್ದ ಹಾಗೂ ಜೂ. 30ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ.ಪೂ.)ಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಗಣಿತ ಉಪನ್ಯಾಸಕರ ವೇದಿಕೆ ನೂತನ ಅಧ್ಯಕ್ಷ ಸುಧೀರ್ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ದೀಪಕ್ರಾಜ್, ಬಾಬು ಶ್ರೀನಿವಾಸ ಪಾಲ್ಗೊಂಡಿದ್ದರು. ಶಿಲ್ಪಶ್ರೀ ಪ್ರಾರ್ಥಿಸಿದರು. ವೇದಿಕೆಯ ಅಧ್ಯಕ್ಷ ಡಾ. ಉದಯಕುಮಾರ್ ಸ್ವಾಗತಿಸಿದರು. ಸುಧಾ ಆಡುಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೊ. ಗುರುಪ್ರಸಾದ್ ವಂದಿಸಿದರು.
"
ಶಿಕ್ಷಕರು ಆತ್ಮ ವಿಶ್ವಾಸ, ಅಧ್ಯಯನಶೀಲತೆ, ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡರೆ ಪರಿಣಾಮಕಾರಿಯಾಗಿ ಬೋಧಿಸಬಹುದು. ಕೃತಕ ಬುದ್ಧಿಮತ್ತೆ ಬದಲಾವಣೆ ಎಂದು ಭಾವಿಸಿ ಇಷ್ಟವಿರಲಿ, ಇಲ್ಲದಿರಲಿ ಮೈಗೂಡಿಸಿಕೊಂಡು ಅದರ ಲಾಭವನ್ನು ಭವಿಷ್ಯದ ಬದುಕಿಗೆ ಭದ್ರ ಬುನಾದಿ ಮಾಡಿಕೊಳ್ಳಬೇಕು.