ಉಡುಪಿಯ ಪರ್ಕಳದಲ್ಲಿ ಆಯೋಜಿಸಿದ್ದ ಶಿಶು ಸ್ಪರ್ಧೆಯನ್ನು ರೊ. ಪಿ.ಎಚ್.ಎಫ್. ಗೀತಾಶ್ರೀ ಎಂ. ಉಪಾಧ್ಯಾಯ ಉದ್ಘಾಟಿಸಿದರು. ಡಾ. ಸಂದೀಪ್ ಕುಮಾರ್, ಲಕ್ಷ್ಮೀ ನಾಯ್ಕ್, ಶಾರದಾ ಎಸ್., ಹಿರಿಯಣ್ಣ, ಅನಿಲ್ ಕುಮಾರ್, ಭಾಸ್ಕರ್ ಪೂಜಾರಿ, ದಾವಲ್ಬಿ ವಾಲೀಕಾರ್, ರೊ.ಸಂದೀಪ್ ಕುಮಾರ್, ರೊ.ಪ್ರಭಾಕರ್ ಶೆಟ್ಟಿ ಕೆ. ಇತರರಿದ್ದರು.
Published on:
Copied
Follow Us
* ಮಕ್ಕಳ ತಜ್ಞ ಡಾ. ಸಂದೀಪ್ ಕುಮಾರ್ ಅನಿಸಿಕೆ
* ತಾಯಿ-ಮಗುವಿನ ಆರೋಗ್ಯ ಮಾಹಿತಿ, ಶಿಶು ಸ್ಪರ್ಧೆ
ಉಡುಪಿ: ಶಿಶು ಸ್ಪರ್ಧೆಯಲ್ಲಿ ಬಹುಮಾನ ಸಿಗುವುದು ಮುಖ್ಯವಲ್ಲ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಹೆತ್ತವರು ಹೆಚ್ಚಿನ ಕಾಳಜಿ ವಹಿಸುವುದೇ ನಿಜವಾದ ಗೆಲುವು. ಪಾಲಕರಿಗೆ ದೇವರು ನೀಡಿರುವ ಅತ್ಯಮೂಲ್ಯ ಉಡುಗೊರೆಯೇ ಮಕ್ಕಳು. ಅವರನ್ನು ಪ್ರೀತಿಯಿಂದ ಬೆಳೆಸಬೇಕು ಎಂದು ಮಣಿಪಾಲ ಕೆಎಂಸಿಯ ಪೀಡಿಯಾಟ್ರಿಕ್ ಐಸಿಯು ವಿಭಾಗದ ಪ್ರಭಾರಿ ಮುಖ್ಯಸ್ಥ, ಮಕ್ಕಳ ತಜ್ಞ ಡಾ. ಸಂದೀಪ್ ಕುಮಾರ್ ಕರೆ ನೀಡಿದರು.
ಉಡುಪಿ ಪರ್ಕಳದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಆಡಿಟೋರಿಯಂನಲ್ಲಿ ರೋಟರಿ ಐಸಿರಿ ಪರ್ಕಳ, ಆರ್ಸಿಸಿ ಐಸಿರಿ ಪರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಪರ್ಕಳ ಸಹಭಾಗಿತ್ವದಲ್ಲಿ ಭಾನುವಾರ (ಜು.19) ಆಯೋಜಿಸಿದ್ದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಹಾಗೂ ಶಿಶು ಸ್ಪರ್ಧೆ-2026ರ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೂ ಮೀಸಲಿಡಿ ಸಮಯ
ಕಾರ್ಯಕ್ರಮ ಉದ್ಘಾಟಿಸಿದ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3182ರ ವಲಯ-4ರ ತಾಯಿ-ಮಗುವಿನ ಆರೋಗ್ಯ ವಿಭಾಗದ ಸಂಯೋಜಕಿ ರೊ. ಪಿ.ಎಚ್.ಎಫ್. ಗೀತಾಶ್ರೀ ಎಂ. ಉಪಾಧ್ಯಾಯ ಮಾತನಾಡಿ, ಪಾಲಕರು ತಮ್ಮ ಮಕ್ಕಳೊಂದಿಗೆ ಸಾಧ್ಯವಿದ್ದಷ್ಟು ಹೆಚ್ಚು ಸಮಯ ಕಳೆಯಬೇಕು. ಅವರಿಗೆ ಮೌಲ್ಯಯುತ ಸಂಸ್ಕಾರ ನೀಡಬೇಕು. ಉಳಿದ ಕೆಲಸಗಳಿಗೆ ಸಮಯ ಮೀಸಲಿಡುವಂತೆ ಮಕ್ಕಳಿಗಾಗಿಯೂ ಸಮಯ ಮೀಸಲಿಡಬೇಕು ಎಂದರು.
ಆರ್ಸಿಸಿ ಐಸಿರಿಯ ಅಧ್ಯಕ್ಷೆ ಲಕ್ಷ್ಮೀ ನಾಯ್ಕ್, ಕಾರ್ಯದರ್ಶಿ ಶಾರದಾ ಎಸ್., ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಪರ್ಕಳದ ಗೌರವಾಧ್ಯಕ್ಷ ಹಿರಿಯಣ್ಣ, ಅಧ್ಯಕ್ಷ ರೊ. ಅನಿಲ್ ಕುಮಾರ್, ಕಾರ್ಯದರ್ಶಿ ಭಾಸ್ಕರ್ ಪೂಜಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟುವಿನ ಆರೋಗ್ಯ ಸಹಾಯಕಿ ದಾವಲ್ಬಿ ವಾಲೀಕಾರ್ ಉಪಸ್ಥಿತರಿದ್ದರು.
ರೋಟರಿ ಐಸಿರಿ ಪರ್ಕಳ ಅಧ್ಯಕ್ಷ ರೊ.ಸಂದೀಪ್ ಕುಮಾರ್ ಸ್ವಾಗತಿಸಿದರು. ರೋಟರಿ ಐಸಿರಿ ಪರ್ಕಳದ ಸಮುದಾಯ ಸೇವಾ ನಿರ್ದೇಶಕ ರೊ.ಪ್ರಭಾಕರ್ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜೇಶ್ ಡಿ. ಶೆಣೈ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ಇಂಟರಾಕ್ಟ್ ಸಭಾಪತಿ ರೊ.ವೆಂಕಟೇಶ್ ಭಟ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.
ಪಾಲಕರೊಂದಿಗೆ ಸಂವಾದ, ಆರೋಗ್ಯ ತಪಾಸಣೆ
ಶಿಶು ಸ್ಪರ್ಧೆಯು 2 ವರ್ಷದೊಳಗಿನ ಹಾಗೂ 2ರಿಂದ 4 ವರ್ಷದೊಳಗಿನ ಮಕ್ಕಳ ವಿಭಾಗಗಳಲ್ಲಿ ನಡೆಯಿತು. ಮಣಿಪಾಲ ಕೆಎಂಸಿಯ ಪೀಡಿಯಾಟ್ರಿಕ್ ಐಸಿಯು ವಿಭಾಗದ ಪ್ರಭಾರಿ ಮುಖ್ಯಸ್ಥ ಹಾಗೂ ಮಕ್ಕಳ ತಜ್ಞ ಡಾ. ಸಂದೀಪ್ ಕುಮಾರ್ ಹಾಗೂ ವೈದ್ಯಕೀಯ ತಂಡದವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಪಾಲಕರೊಂದಿಗೆ ಸಂವಾದ ನಡೆಯಿತು. ಮಕ್ಕಳ ಆರೋಗ್ಯ, ಪೌಷ್ಟಿಕಾಂಶ, ಬೆಳವಣಿಗೆ ಹಾಗೂ ಆರೈಕೆಗೆ ಸಂಬಂಧಿಸಿ ಚರ್ಚೆ ನಡೆಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.