ಫೆ. 8ರಂದು ಮಣಿಪಾಲ್​ ಮ್ಯಾರಥಾನ್​

ಮಾಹೆ  ಪ್ರೊ. ಚಾನ್ಸಲರ್​ ಡಾ. ಎಚ್​.ಎಸ್​. ಬಲ್ಲಾಳ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,
ಮಾಹೆ ಪ್ರೊ. ಚಾನ್ಸಲರ್​ ಡಾ. ಎಚ್​.ಎಸ್​. ಬಲ್ಲಾಳ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,
Published on
ಉಡುಪಿ: ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆಶ್ರಯದಲ್ಲಿ ಹಸಿರುಭರಿತ, ಸುಸ್ಥಿರ ನಾಳಿನ ಭವಿಷ್ಯಕ್ಕಾಗಿ ಓಟ ಎಂಬ ಧ್ಯೇಯವಾಕ್ಯದೊಂದಿಗೆ ಮಣಿಪಾಲ ಕೆಎಂಸಿ ಗ್ರೀನ್ಸ್​ನಲ್ಲಿ 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್​ ಫೆ. 8ರಂದು ಆಯೋಜಿಸಲಿದೆ ಎಂದು ಮಾಹೆ ಪ್ರೊ. ಚಾನ್ಸಲರ್​ ಡಾ. ಎಚ್​.ಎಸ್​. ಬಲ್ಲಾಳ್​ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 42 ಕಿಮೀ ಫುಲ್​ ಮ್ಯಾರಥಾನ್​, 21 ಕಿಮೀ ಹಾಫ್​ ಮ್ಯಾರಥಾನ್​, 10 ಕಿಮೀ , 5 ಕಿಮೀ ಮತ್ತು 3 ಕಿಮೀ ಫನ್​ ರನ್​ ಐದು ರೇಸ್​ ವಿಭಾಗಗಳನ್ನು ಒಳಗೊಂಡಿದೆ. ಮಣಿಪಾಲ್​ ಮ್ಯಾರಥಾನ್​ನಲ್ಲಿ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ 20,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ. ದುಬೈ, ಇಂಗ್ಲೆಂಡ್​, ಇಥಿಯೋಪಿಯಾ, ಜರ್ಮನಿ, ಜಪಾನ್​, ಕೀನ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮೊದಲಾದ ದೇಶಗಳಿಂದಲೂ ಓಟಗಾರರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ 25 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ವಿತರಿಸಲಾಗುವುದು ಎಂದರು.

ಕ್ರೀಡಾ ವಿಭಾಗ ಕಾರ್ಯದರ್ಶಿ ಡಾ. ವಿನೋದ್​ ಸಿ. ನಾಯಕ್​ ಮಾತನಾಡಿ, ಮಣಿಪಾಲದ ಕೆಎಂಸಿ ಗ್ರೀನ್ಸ್​ನಲ್ಲಿ ಓಟದ ದಿನ ಬೆಳಗ್ಗೆ 5 ಗಂಟೆಗೆ 42 ಕಿಮೀ ಪೂರ್ಣ ಮ್ಯಾರಥಾನ್​ ಪ್ರಾರಂಭವಾಗುತ್ತದೆ. 5:30 ಕ್ಕೆ 21 ಕಿಮೀ ಹಾಫ್​ ಮ್ಯಾರಥಾನ್​, 6ಕ್ಕೆ 10 ಕಿಮೀ ಓಟ, 6:45 ಕ್ಕೆ 5 ಕಿಮೀ ಓಟ ಮತ್ತು 8ಕ್ಕೆ 3 ಕಿಮೀ ಮೋಜಿನ ಓಟ ನಡೆಯಲಿದೆ. ದೈಹಿಕವಾಗಿ ಮತ್ತು ದೃಷ್ಟಿ ವಿಕಲಚೇತನರಿಗಾಗಿ ವಿಶೇಷ ವಿಭಾಗದ ಓಟಗಳಿಗೆ ಬೆಳಿಗ್ಗೆ 8:30ಕ್ಕೆ ಚಾಲನೆ ನೀಡಲಾಗುವುದು ಎಂದರು.

ಮಣಿಪಾಲ್​ ಮ್ಯಾರಥಾನ್​ನ ಪ್ರಮುಖ ವಿಶೇಷತೆಯೆಂದರೆ 42ಕಿಮೀ ಪೂರ್ಣ ಮ್ಯಾರಥಾನ್​ ಸುಂದರವಾದ ಕಡಲತೀರದ ಮಾರ್ಗವನ್ನು ಹೊಂದಿದ್ದು, ಓಟಗಾರರಿಗೆ ವಿಶಿಷ್ಟವಾದ ಓಟದ ಅನುಭವವನ್ನು ನೀಡುತ್ತದೆ. 10 ಕಿಮೀ ಓಟವು ಹಾವಂಜೆಯ ಮಣಿಪಾಲ್​ ಹಾಸ್ಪಿಸ್​ ಕೇಂದ್ರ ಸಮೀಪ ಸಾಗಿ ಬರಲಿದೆ. ಮಣಿಪಾಲ್​ ಮ್ಯಾರಥಾನ್​ 2026ಕ್ಕೆ ನೋಂದಣಿ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

ಉಪಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ.) ಎಂ. ಡಿ. ವೆಂಕಟೇಶ್​, ಉಪಕುಲಾಧಿಪತಿಗಳಾದ ಡಾ. ನಾರಾಯಣ ಸಭಾಹಿತ್​, ಡಾ. ಶರತ್​ ರಾವ್​, ಡಾ. ಮಧು ವೀರರಾಘವನ್​, ಡಾ. ದಿಲೀಪ್​ ಜಿ. ನಾಯಕ್​, ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್​ ವೇಣುಗೋಪಾಲ್​, ರಿಜಿಸ್ಟ್ರಾರ್​ ಡಾ. ಪಿ. ಗಿರಿಧರ್​ ಕಿಣಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net