ಮಂಗಳೂರು ವಿವಿಗೆ ಚಾಂಪಿಯನಶಿಪ್​ ಕಿರೀಟ

ಉಡುಪಿ ತೆಂಕನಿಡಿಯೂರು ಸರ್ಕಾರಿ ಕಾಲೇಜ್​ನಲ್ಲಿ ನಡೆದ ಕ್ರಾಸ್​ ಕಂಟ್ರಿ ಪಂದ್ಯಾಟದಲ್ಲಿ ಚಾಂಪಿಯನ್​ ಆದ ಮಂಗಳೂರು ವಿವಿಗೆ ಪ್ರಶಸ್ತಿ ಹಾಗೂ ಮೆಡಲ್​ ವಿತರಿಸಲಾಯಿತು. ಡಾ. ಜಯಪ್ರಕಾಶ, ಯಶ್​ಪಾಲ್​ ಸುವರ್ಣ, ವಿನಯಕುಮಾರ ಸೊರಕೆ, ಎಂ.ಎ. ಗಫೂರ್​, ಜಿ.ಎಸ್​. ಚಂದ್ರಶೇಖರ, ಡಾ. ಕೃಷ್ಣಪ್ರಸಾದ ಕೂಡ್ಲು, ನಿತ್ಯಾನಂದ ವಿ. ಗಾಂವ್ಕರ ಇನ್ನಿತರರಿದ್ದರು.
ಉಡುಪಿ ತೆಂಕನಿಡಿಯೂರು ಸರ್ಕಾರಿ ಕಾಲೇಜ್​ನಲ್ಲಿ ನಡೆದ ಕ್ರಾಸ್​ ಕಂಟ್ರಿ ಪಂದ್ಯಾಟದಲ್ಲಿ ಚಾಂಪಿಯನ್​ ಆದ ಮಂಗಳೂರು ವಿವಿಗೆ ಪ್ರಶಸ್ತಿ ಹಾಗೂ ಮೆಡಲ್​ ವಿತರಿಸಲಾಯಿತು. ಡಾ. ಜಯಪ್ರಕಾಶ, ಯಶ್​ಪಾಲ್​ ಸುವರ್ಣ, ವಿನಯಕುಮಾರ ಸೊರಕೆ, ಎಂ.ಎ. ಗಫೂರ್​, ಜಿ.ಎಸ್​. ಚಂದ್ರಶೇಖರ, ಡಾ. ಕೃಷ್ಣಪ್ರಸಾದ ಕೂಡ್ಲು, ನಿತ್ಯಾನಂದ ವಿ. ಗಾಂವ್ಕರ ಇನ್ನಿತರರಿದ್ದರು.
Published on: 

* ಅಖಿಲ ಭಾರತ ಅಂತರ್​ ವಿವಿ ಮಟ್ಟದ ಕ್ರಾಸ್​ ಕಂಟ್ರಿ ಪಂದ್ಯಾಟ

* ತೆಂಕನಿಡಿಯೂರು ಸರ್ಕಾರಿ ಕಾಲೇಜ್​ನಲ್ಲಿ ಆಯೋಜನೆ

ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ಅಖಿಲ ಭಾರತ ಅಂತರ್​ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್​ ಕಂಟ್ರಿ ಚಾಂಪಿಯನಶಿಪ್​ ಶನಿವಾರ ನಡೆಯಿತು.

ಪುರುಷರ ಓಟಕ್ಕೆ ಶಾಸಕ ಯಶ್​ಪಾಲ್​ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕಾಲೇಜ್​ ಶಿಕ್ಷಣ ಇಲಾಖೆಯ ಆಯುಕ್ತ ಎಚ್​.ಎನ್​. ಗೋಪಾಲಕೃಷ್ಣ ಚಾಲನೆ ನೀಡಿದರು. ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಚಾಲನೆ ನೀಡಿದರು.

ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಸಂತೋಷ ಬಿ. ಜಗಲಸಾರ, ಕಾಲೇಜ್​ ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್​., ಉದ್ಯಮಿ ಆನಂದ ಸುವರ್ಣ, ಪ್ರಖ್ಯಾತ್​ ಶೆಟ್ಟಿ, ಲಯನ್ಸ್​ ಕ್ಲಬ್​ ಉಡುಪಿ ಅಧ್ಯಕ್ಷ ನಾಗರಾಜ ಸಂಕೊಳ್ಳಿ, ಲಯನ್ಸ್​ ಕ್ಲಬ್​ ಅಮೃತ ಅಧ್ಯಕ್ಷೆ ಚಂದ್ರಿಕಾ ಜೆ.ಪಿ., ಉಡುಪಿ ಜಿಲ್ಲಾ ಆಥ್ಲೆಟಿಕ್ಸ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ ರೈ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಎಐಯು ನವದೆಹಲಿಯ ವೀಕ್ಷಕ ಡಾ. ಜಯಪ್ರಕಾಶ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜ್​ನಲ್ಲಿ ಇಂತಹ ರಾಷ್ಟ್ರಮಟ್ಟದ ಪಂದ್ಯಾಟ ಅಚ್ಚುಕಟ್ಟಾಗಿ ಆಯೋಜಿಸಿರುವುದು ವಿಶೇಷ. ಯಾವುದೇ ಲೋಪದೋಷ, ತೊಡಕು ಇಲ್ಲದೆ ನಡೆದ ಕೆಲವೇ ಕೆಲವು ರಾಷ್ಟ್ರಮಟ್ಟದ ಪಂದ್ಯಾಕೂಟದಲ್ಲಿ ಇದೂ ಸೇರಿದೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ವಿನಯಕುಮಾರ ಸೊರಕೆ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ, ಪ್ರಸಾದ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ ಕೂಡ್ಲು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್​ ಎಸ್​. ಡಿಸೋಜಾ, ಕಾಲೇಜ್​ನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ, ಸಿಡಿಸಿ ಸದಸ್ಯ ಪ್ರವಿಣಕುಮಾರ್​, ಧನಂಜಯ ಕುಂದರ್​ ಉಪಸ್ಥಿತರಿದ್ದರು.

ಕಾಲೇಜ್​ನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್​ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಅನುರಾಗ್​ ನಿರೂಪಿಸಿದರು.

ಪಂದ್ಯಾಟದ ಫಲಿತಾಂಶ

ಪುರುಷರ 10 ಕಿಮೀ ವಿಭಾಗದಲ್ಲಿ ಮುಂಬಯಿ ವಿವಿಯ ಸ್ವರಾಜ ಸಂದೀಪ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ ಕೆ. ದ್ವಿತೀಯ, ಹರ್ಯಾಣ ರೋಹ್ತಕ್​ ಮಹರ್ಷಿ ದಯಾನಂದ ವಿವಿಯ ಅವಕಾಶ್​ ತೃತೀಯ ಹಾಗೂ ಸಿಜಿಸಿ ಮೊಹಾಲಿ ವಿವಿಯ ದಿನೇಶ ಚತುರ್ಥ ಸ್ಥಾನ ಗಳಿಸಿದರು.

ಮಹಿಳೆಯರ 10 ಕಿಮೀ ವಿಭಾಗದಲ್ಲಿ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿಯ ರಾಶಿ ಸಿ.ಎಂ. ಪ್ರಥಮ, ಜಿನ್ಸಿ ಜಿ. ದ್ವಿತೀಯ, ರಾಜಸ್ಥಾನ ಬಿಕಾನೇರ್​ ಮಹಾರಾಜ ಗಂಗಾಸಿಂಗ್​ ವಿವಿಯ ವಂದನಾ ಪಟೇಲ ತೃತೀಯ ಹಾಗೂ ಹರ್ಯಾಣ ರೋಹ್ತಕ್​ ಮಹರ್ಷಿ ದಯಾನಂದ ವಿವಿಯ ಪೂಜಾ ಚತುರ್ಥ ಸ್ಥಾನ ಗಳಿಸಿದರು.

ಚಾಂಪಿಯನಶಿಪ್​

ಪುರುಷರ ವಿಭಾಗದಲ್ಲಿ ರಾಜಸ್ಥಾನ ವಿವಿ ಜೈಪುರ ಪ್ರಥಮ, ಕ್ಯಾಲಿಕಟ್​ ವಿವಿ ದ್ವಿತೀಯ ಹಾಗೂ ಮಂಗಳೂರು ವಿವಿ ತೃತೀಯ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಹರ್ಯಾಣ ರೋಹ್ತಕ್​ ಮಹರ್ಷಿ ದಯಾನಂದ ವಿವಿ ದ್ವಿತೀಯ ಹಾಗೂ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿ ತೃತೀಯ.

ಸಮಗ್ರ ಪಟ್ಟ, ಬಹುಮಾನ ವಿತರಣೆ

ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಗಳಿಸಿದವರಿಗೆ ಆಳ್ವಾಸ್​ ಕಾಲೇಜಿನ ಡಾ. ಮೋಹನ ಆಳ್ವಾ ಅವರು ಕ್ರಮವಾಗಿ 10 ಸಾವಿರ ರೂ., 7,500 ರೂ., 5 ಸಾವಿರ ರೂ. ಹಾಗೂ 2,500 ರೂ. ನಗದು ಬಹುಮಾನ ನೀಡಿದರು. ಪಂದ್ಯಾಕೂಟದಲ್ಲಿ ಒಟ್ಟು 850 ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಭಾಗವಹಿಸಿದ್ದರು.

10 ಕಿಮೀ ಓಟ

ತೆಂಕನಿಡಿಯೂರು ಕಾಲೇಜ್​ ಮೈದಾನದಿಂದ ಆರಂಭವಾದ ಓಟ ಹಂಪನಕಟ್ಟೆ, ಕದಿಕೆ, ಆಸರೆ ಬೀಚ್​, ಕೆಮ್ಮಣ್ಣು, ಹಂಪನಕಟ್ಟೆ ಮಾರ್ಗವಾಗಿ ಸಾಗಿ ಪುನ: ತೆಂಕನಿಡಿಯೂರು ಕಾಲೇಜ್​ ಮೈದಾನದಲ್ಲಿ ಮುಕ್ತಾಯಗೊಂಡಿತು.