ಮಂಗಳೂರು ವಿವಿ ಪದವಿ ಪರೀಕ್ಷಾ ಫಲಿತಾಂಶ ಪ್ರಕಟ

Result
Result
Published on
​ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್-ಜುಲೈ ನಲ್ಲಿ ನಡೆಸಿದ ವಿವಿಧ ಪದವಿ ಕೋರ್ಸ್‌ಗಳ 6ನೇ ಸೆಮಿಸ್ಟರ್ ಹಾಗೂ ಬಿ.ಹೆಚ್.ಎಂ 8ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ (ಜುಲೈ 20) ಅಧಿಕೃತವಾಗಿ ಪ್ರಕಟಿಸಿದೆ.
ಮೌಲ್ಯಮಾಪನ ಪೂರ್ಣಗೊಂಡ ಕೇವಲ ಎರಡೇ ದಿನಗಳಲ್ಲಿ ಅತ್ಯಂತ ವೇಗವಾಗಿ ಫಲಿತಾಂಶ ಪ್ರಕಟಿಸಿರುವುದು ವಿಶೇಷವಾಗಿದೆ.

​13,286 ವಿದ್ಯಾರ್ಥಿಗಳ ಫಲಿತಾಂಶ ಲಭ್ಯ


ಬಿ.ಎಸ್ಸಿ, ಬಿ.ಕಾಂ, ಬಿ.ಎಸ್.ಡಬ್ಲ್ಯು, ಬಿ.ಸಿ.ಎ, ಫ್ಯಾಷನ್ ಡಿಸೈನಿಂಗ್, ಫುಡ್ ಟೆಕ್ನಾಲಜಿ ಸೇರಿದಂತೆ ವಿವಿಧ ಪ್ರಮುಖ ಪದವಿ ಕೋರ್ಸ್‌ಗಳ 6ನೇ ಸೆಮಿಸ್ಟರ್ ಹಾಗೂ ಬಿ.ಹೆಚ್.ಎಂ 8ನೇ ಸೆಮಿಸ್ಟರ್ ಮೌಲ್ಯಮಾಪನ ಜುಲೈ 18ರಂದು ಪೂರ್ಣಗೊಂಡಿತ್ತು. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 17,347 ವಿದ್ಯಾರ್ಥಿಗಳ ಪೈಕಿ ಮೊದಲ ಹಂತದಲ್ಲಿ 13,286 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು UUCMS Portal ನಲ್ಲಿ ತಮ್ಮ ಲಾಗಿನ್ ಐಡಿ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

​ತಂತ್ರಜ್ಞಾನ ಬಳಕೆಯಿಂದ ಶೀಘ್ರ ಫಲಿತಾಂಶ


ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ಉದ್ಯೋಗಾವಕಾಶಗಳ ಹಿತದೃಷ್ಟಿಯಿಂದ ಈ ಬಾರಿ ವಿಶ್ವವಿದ್ಯಾನಿಲಯವು ಮೌಲ್ಯಮಾಪನ ಕೇಂದ್ರಗಳಲ್ಲಿಯೇ ಅಂಕಗಳ ನಮೂದನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಿತ್ತು. ಪರೀಕ್ಷಾ ಮಂಡಳಿ, ಮೌಲ್ಯಮಾಪಕರು ಹಾಗೂ ಸಿಬ್ಬಂದಿಗಳ ಶ್ರಮದಿಂದಾಗಿ ಅತಿ ಕಡಿಮೆ ಅವಧಿಯಲ್ಲಿ, ಆಂತರಿಕ ಮತ್ತು ಪ್ರಾಯೋಗಿಕ ಅಂಕಗಳೊಂದಿಗೆ ಅನುಕಂಪ ಅಂಕ (Grace marks) ಪರಿಶೀಲಿಸಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ.

​ಉಳಿದ ಫಲಿತಾಂಶ ಹಾಗೂ ಮರುಮೌಲ್ಯಮಾಪನ


ಉಳಿದಂತೆ ಬಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯು 8ನೇ-6ನೇ ಸೆಮಿಸ್ಟರ್, 2ನೇ ಮತ್ತು 4ನೇ ಸೆಮಿಸ್ಟರ್ ಹಾಗೂ 'ನಾನ್-ಎನ್‌ಇಪಿ' ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಎಲ್ಲಾ ಫಲಿತಾಂಶಗಳು ಹೊರಬಿದ್ದ ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು UUCMS ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net