ಆರು ವರ್ಷದ ಬಳಿಕ ಒಂದಾದ ಪತಿ-ಪತ್ನಿ

ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೋರೋಗ ಕಾಯಿಲೆಯಿಂದ ಗುಣಮುಖರಾದ ಪತಿ ರಮೇಶ್​ ಅವರನ್ನು ತಮಿಳುನಾಡಿನಿಂದ ಬಂದಿದ್ದ ಪತ್ನಿ ಪ್ರಿಯಾ ಸ್ವೀಕರಿಸಿದರು. ವಿಶು ಶೆಟ್ಟಿ ಅಂಬಲಪಾಡಿ, ಡಾ.ವಾಸುದೇವ್​, ಡಾ. ಸುನೀಲ್​, ಆರೋಗ್ಯ ಸಹಾಯಕರು ಇದ್ದರು.
ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೋರೋಗ ಕಾಯಿಲೆಯಿಂದ ಗುಣಮುಖರಾದ ಪತಿ ರಮೇಶ್​ ಅವರನ್ನು ತಮಿಳುನಾಡಿನಿಂದ ಬಂದಿದ್ದ ಪತ್ನಿ ಪ್ರಿಯಾ ಸ್ವೀಕರಿಸಿದರು. ವಿಶು ಶೆಟ್ಟಿ ಅಂಬಲಪಾಡಿ, ಡಾ.ವಾಸುದೇವ್​, ಡಾ. ಸುನೀಲ್​, ಆರೋಗ್ಯ ಸಹಾಯಕರು ಇದ್ದರು.
Published on

* ಮನೋರೋಗಿಯ ರಕ್ಷಿಸಿದ್ದ ವಿಶು ಶೆಟ್ಟಿ 

* ಊರು ತೊರೆದಿದ್ದ ತಮಿಳುನಾಡು ವ್ಯಕ್ತಿ

ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಆರೈಕೆ, ಚಿಕಿತ್ಸೆಯ ಫಲವಾಗಿ ಮನೋರೋಗದಿಂದ ಮುಕ್ತವಾದ ತಮಿಳುನಾಡಿನ ವ್ಯಕ್ತಿಯೊಬ್ಬರು ಆರು ವರ್ಷದ ಬಳಿಕ ತನ್ನ ಕುಟಂಬವನ್ನು ಸೇರಿದ ಮಾನವೀಯ ಕಾರ್ಯ ಉಡುಪಿಯಲ್ಲಿ ನಡೆದಿದೆ. 
ಮೂರುವರೆ ತಿಂಗಳ ಹಿಂದೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ರಕ್ಷಿಸಲ್ಪಟ್ಟಿದ್ದ ಮನೋರೋಗಿ ರಮೇಶ್​ (35), ಇದೀಗ ಕಾಯಿಲೆಯಿಂದ ಗುಣಮುಖರಾಗಿದ್ದು ದೂರದ ತಮಿಳುನಾಡಿನಿಂದ ಬಂದಿದ್ದ ಪತ್ನಿ ಪ್ರಿಯಾ ಯಾಳಗಿ ಅವರೊಂದಿಗೆ ಊರು ಸೇರಿದ್ದಾರೆ.

ಮಾನವೀಯ ಚಿಕಿತ್ಸೆ

ಮಾನಸಿಕ ಅಸ್ವಸ್ಥನಾಗಿ ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಾಗರಿಕ ರೀತಿಯಲ್ಲಿ ತಿರುಗಾಡುತ್ತಿದ್ದ, ಸಾರ್ವಜನಿಕರಿಗೆ ಭೀತಿ ಹುಟ್ಟಿಸುತ್ತಿದ್ದ ರಮೇಶ್​ನನ್ನು ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಮನೋರೋಗ ತಜ್ಞ ಡಾ.ವಾಸುದೇವ್​, ಡಾ. ಸುನೀಲ್​, ಆರೋಗ್ಯ ಸಹಾಯಕರು ಹಾಗೂ ಇಸಿಆರ್​ಸಿ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ದೀರ್ಘಕಾಲದ ಸಮಾಲೋಚನೆ ಹಾಗೂ ಆರೈಕೆಗೆ ನಿಧಾನವಾಗಿ ಸ್ಪಂದಿಸಿದ ರೋಗಿ ತನ್ನ ಊರು, ರಾಜ್ಯ ಹಾಗೂ ಕುಟುಂಬದ ವಿವರ ನೀಡಿದ್ದಾರೆ. 

ಪತ್ನಿ, ಇಬ್ಬರು ಮಕ್ಕಳು

ರೋಗಿ ನೀಡಿದ್ದ ಮಾಹಿತಿಯ ಆಧಾರದಲ್ಲಿ ಡಾ. ವಾಸುದೇವ್​ ಅವರು ಆತನ ಸಂಬಂಧಿಕರನ್ನು ಪತ್ತೆ ಹಚ್ಚಲು ನಿರಂತರ ಪ್ರಯತ್ನಿಸಿ ಯಶಸ್ವಿಯಾದರು. ಬಡ ಕುಟುಂಬದ  ರೋಗಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, ಅವರ ಮನವೊಲಿಸಿ ಉಡುಪಿಗೆ ಕರೆಸುವಲ್ಲಿಯೂ ವೈದ್ಯರು ಯಶಸ್ವಿಯಾಗಿದ್ದಾರೆ.

ಆರ್ಥಿಕ ಸಹಕಾರ

ಸಂಬಂಧಿ ಮಹಿಳೆಯೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿಯ ಪತ್ನಿ ಪ್ರಿಯಾ, ತನ್ನ ಗಂಡ ಪತ್ತೆಯಾಗಿದ್ದರಿಂದ ಹಾಗೂ ಮನೋರೋಗದಿಂದ ವಾಸಿಯಾಗಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಚಿಕಿತ್ಸಾ ಸಮಯದಲ್ಲಿ ರೋಗಿಗೆ ಕ್ಷಯರೋಗವೂ ಇರುವುದು ಪತ್ತೆಯಾಗಿದ್ದು, ಅದಕ್ಕೂ ಔಷಧೋಪಚಾರ ಮುಂದುವರಿಸಲಾಗಿದೆ. ಕುಟುಂಬದ ಬಡತನದ ಮಾಹಿತಿ ತಿಳಿದ ವಿಶು ಶೆಟ್ಟಿ ಅಂಬಲಪಾಡಿ, ತಮಿಳುನಾಡಿಗೆ ತೆರಳಲು ಪ್ರಯಾಣ ವೆಚ್ಚವಾಗಿ 4 ಸಾವಿರ ರೂ. ನೀಡಿ ಸಹಕರಿಸಿದರು. 6 ವರ್ಷದಿಂದ ಬೇರೆಯಾಗಿದ್ದ ಪತಿ-ಪತ್ನಿ ಇದೀಗ ಮಾನವೀಯ ಕಾರ್ಯದಿಂದ ಒಂದಾಗುವಂತಾಗಿದೆ.
"

ನನ್ನ ಪತಿ ನಾಪತ್ತೆಯಾಗಿ 6 ವರ್ಷವಾಗಿತ್ತು. ಮರಳಿ ಮನೆಗೆ ಬರಬಹುದೆಂದು ಕಾದು ಕಾದು ಸೋತಿದ್ದೆವು. ಎಲ್ಲಿಗೆ ಹೋಗಿದ್ದಾರೆಂದೂ ತಿಳಿಯಲಾಗದೆ ನಾನು ಹಾಗೂ ಮಕ್ಕಳು ದು:ಖದಲ್ಲಿದ್ದೆವು. ಉಡುಪಿಯ ವಿಶು ಶೆಟ್ಟಿ, ವೈದ್ಯರು, ಸಿಬ್ಬಂದಿಯ ಕಾರ್ಯಕ್ಕೆ ತಲೆಬಾಗಿ ನಮಿಸುತ್ತೇನೆ. ನನ್ನ ಪತಿಯೊಂದಿಗೆ ಸಂತಸದಿಂದ ಊರಿಗೆ ತೆರಳುತ್ತಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net