ಉಡುಪಿ: ಹುಲಿ ಉಗುರು ಎಂದು ನಂಬಿಸಿ ನಕಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ವಂಚಕನನ್ನು ಉಡುಪಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನರಾಜ್ (58) ಬಂಧಿತ ವ್ಯಕ್ತಿ.
ಸಾಧು ವೇಷ ತೊಟ್ಟಿದ್ದ ವಂಚಕ, ಹುಲಿ ಉಗುರು ಅಸಲಿ ಎಂದು ನಂಬಿಸಿ ಉಡುಪಿ ನಗರದ ಹಳೆಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುವ ಯತ್ನದಲ್ಲಿದ್ದನು. ಆತನ ವರ್ತನೆಯಿಂದ ಶಂಕಿತರಾದ ಜನರು ಉಡುಪಿ ನಾಗರಿಕ ಸಮಿತಿಯ ಗಮನಕ್ಕೆ ತಂದರು.
ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಉಡುಪಿ ನಗರ ಠಾಣೆಯ ಪೊಲೀಸರು ನಕಲಿ ಸಾಧುವನ್ನು ಬಂಧಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಕಾರ್ಯಾಚರಣೆಗೆ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಸಹಕರಿಸಿದರು.