

ಉಡುಪಿ: ದೇಶಾದ್ಯಂತ ಸೆ.17ರಿಂದ ಅ.15ರ ವರೆಗೆ 'ಸ್ವಚ್ಛತಾ ಹಿ ಸೇವಾ-2026' ಅಭಿಯಾನ ನಡೆಯುತ್ತಿದ್ದು, ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ವಿಶ್ವ ಪ್ರವಾಸೋದ್ಯಮದ ದಿನವೂ ಆಗಿದ್ದು ಬೀದಿ ನಾಟಕ ಆಯೋಜಿಸಲಾಗಿದೆ. ಉಡುಪಿ ಉತ್ತಮ ಪ್ರವಾಸೋದ್ಯಮ ಜಿಲ್ಲೆಯಾಗಿದ್ದು ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುತ್ತಾರೆ. ಅವರೆಲ್ಲರಿಗೂ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೊಂಕಣ ರೈಲ್ವೆ ಇಲಾಖೆಯ ಕಾರವಾರ ಪ್ರಾದೇಶಿಕ ವಿಭಾಗದ ರೈಲ್ವೆ ವ್ಯವಸ್ಥಾಪಕಿ (ಆರ್ಆರ್ಎಂ) ಆಶಾ ಶೆಟ್ಟಿ ತಿಳಿಸಿದರು.
ಉಡುಪಿಯ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ 'ಸ್ವಚ್ಛತಾ ಹಿ ಸೇವಾ-2026'ರ ನಿಮಿತ್ತ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ)ನ ವಿದ್ಯಾರ್ಥಿಗಳಿಂದ ಭಾನುವಾರ (ಸೆ.27) ಆಯೋಜಿಸಿದ್ದ ಬೀದಿ ನಾಟಕ (ನುಕ್ಕಡ್ ನಾಟಕ)ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೈಂದೂರಿನ ಅಂಜಲಿ ಆಸ್ಪತ್ರೆಯ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಉಡುಪಿ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಮಾಹಿತಿ ನೀಡಿದರು.
ಎಂಐಸಿ ನಿರ್ದೇಶಕಿ ಡಾ. ಶುಭಾ, ಸಹಾಯಕ ಪ್ರಾಧ್ಯಾಪಕರಾದ ಡಾ. ಕಾರ್ತಿಕೇಯ ಗೋಸ್ವಾಮಿ, ಡಾ. ಚಂದನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಡುಪಿಯ ಉಪ ಮಖ್ಯ ವೈದ್ಯಾಧಿಕಾರಿ ಡಾ. ಸ್ಟೀವನ್ ಜಾರ್ಜ್ ಕಾರ್ಯಕ್ರಮ ಆಯೋಜಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಹುಲಿವೇಷ ನೃತ್ಯ ಪ್ರದರ್ಶಿಸಿದರು.
ಸ್ವಚ್ಛತಾ ಹಿ ಸೇವಾ ಅಭಿಯಾನದ ನಿಮಿತ್ತ ಸ್ವಚ್ಛ ಪ್ರವಾಸಿ ತಾಣ ಮತ್ತು ಪಾರಂಪರಿಕ ರೈಲ್ವೆ ತಾಣಗಳಲ್ಲಿ ಸ್ವಚ್ಛತೆ ಹಾಗೂವಿಶ್ವ ಪ್ರವಾಸೋದ್ಯಮ ದಿನದ ನಿಮಿತ್ತ ಉಡುಪಿ, ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣ ಹಾಗೂ ಮುರ್ಡೇಶ್ವರ ರೈಲು ನಿಲ್ದಾಣಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.