ಕೊಡವೂರಿನಲ್ಲಿ ಮೇ 14ರಿಂದ ಮಹಾರುದ್ರ ಯಾಗ

ಕೊಡವೂರು ದೇಗುಲದಲ್ಲಿ ನಡೆಯಲಿರುವ ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆಯನ್ನು ಪ್ರಸಾದ್​ರಾಜ್​ ಕಾಂಚನ್​ ಬಿಡುಗಡೆ ಮಾಡಿದರು. ಸಮಿತಿಯ ಪದಾಧಿಕಾರಿಗಳು ಇದ್ದರು.
ಕೊಡವೂರು ದೇಗುಲದಲ್ಲಿ ನಡೆಯಲಿರುವ ಮಹಾರುದ್ರ ಯಾಗದ ಆಮಂತ್ರಣ ಪತ್ರಿಕೆಯನ್ನು ಪ್ರಸಾದ್​ರಾಜ್​ ಕಾಂಚನ್​ ಬಿಡುಗಡೆ ಮಾಡಿದರು. ಸಮಿತಿಯ ಪದಾಧಿಕಾರಿಗಳು ಇದ್ದರು.
Published on

* ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್​ರಾಜ್​ ಕಾಂಚನ್​ ಮಾಹಿತಿ

* ಶಂಕರನಾರಾಯಣ ದೇವಸ್ಥಾನದಲ್ಲಿ ಆಯೋಜನೆ

ಉಡುಪಿ: ಲೋಕ ಕಲ್ಯಾಣಾರ್ಥ ಹಾಗೂ ನಾಡಿನ ಜನರ ಸುಭೀಕ್ಷೆಗಾಗಿ ಉಡುಪಿಯ ಕೊಡವೂರಿನಲ್ಲಿರುವ ಮಹತೋಬಾರ ಶಂಕರನಾರಾಯಣ ದೇವಸ್ಥಾನದಲ್ಲಿ ಮೇ14ರಿಂದ 19ರ ವರೆಗೆ ಮಹಾರುದ್ರ ಯಾಗ ಹಮ್ಮಿಕೊಳ್ಳಲಾಗಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಕಾರ್ಯದ ನಿಮಿತ್ತ ಪ್ರತಿದಿನವೂ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳಗಳೂ ನಡೆಯಲಿವೆ ಎಂದು ಮಹಾರುದ್ರ ಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್​ರಾಜ್​ ಕಾಂಚನ್​ ತಿಳಿಸಿದರು.
ಮಲ್ಪೆ ಸಮೀಪದ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶನಿವಾರ (ಏ.18) ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ರುದ್ರಯಾಗವನ್ನೂ ಸಹ ನಾಡಹಬ್ಬದಂತೆ ಅಚರಿಸಲು ನಿರ್ಧರಿಸಿದ್ದೇವೆ. ತನ್ನಿಮಿತ್ತ ಮೇ 10ರಿಂದಲೇ ಜನಾಕರ್ಷಣೆಗಾಗಿ ಜಾಯಿಂಟ್​ ವಿಲ್​, ಆಟಿಕೆಗಳು, ಆಟೋಟ ಪರಿಕರಗಳು, ಬೃಹತ್​ ವಸ್ತು ಪ್ರದರ್ಶನ ಹಾಗೂ ವಿವಿಧ ಮಾರಾಟ ಮಳಿಗೆಗಳು ಸಾರ್ವಜನಿಕರ ಮನ ರಂಜಿಸಲಿವೆ ಎಂದರು.

ಐದು ದಿನ ಧಾರ್ಮಿಕ ಸಂಭ್ರಮ

ಮೇ 14ರಂದು ಯಾಗದ ಪೂರ್ವಭಾವಿಯಾಗಿ ಮಲ್ಪೆಯಿಂದ ಕೊಡವೂರು ಶಂಕರನಾರಾಯಣ ದೇವಸ್ಥಾನದವರೆಗೆ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. 15ರಂದು ಮಹಾರುದ್ರ ಯಾಗ, ಗಣಯಾಗದ ಧಾರ್ಮಿಕ ವಿಧಿ-ವಿಧಾನ ಆರಂಭವಾಗಲಿದೆ. ಅದೇ ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮೇ 16ರಂದು ಮಣಿಪಾಲದ ಕೆಎಂಸಿ, ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಪ್ರಸಾದ್​ ನೇತ್ರಾಲಯ ಉಡುಪಿ ಸಹಭಾಗಿತ್ವದಲ್ಲಿ ಆರೋಗ್ಯ ಉಚಿತ ಶಿಬಿರ ಆಯೋಜಿಸಲಾಗಿದೆ. ಮೇ 17ರಂದು ಮಲ್ಪೆ ಬೀಚ್​ನಲ್ಲಿ ವಿವಿಧ ಸಂಪ್ರದಾಯಿಕ ಕ್ರೀಡಾಕೂಟಗಳ ಸ್ಪರ್ಧೆ ನಡೆಯಲಿದೆ ಎಂದರು.

ಬೃಹತ್​ ಉದ್ಯೋಗ ಮೇಳ

ಜಿಲ್ಲೆಯ 2 ಸಾವಿರಕ್ಕೂ ಅಧಿಕ ವಿದ್ಯಾವಂತ ಯುವ ಸಮುದಾಯದವರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಮೇ 18ರಂದು ಬೃಹತ್​ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್​ ಉದ್ಘಾಟಿಸಲಿದ್ದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 100ಕ್ಕೂ ಅಧಿಕ ಹೆಸರಾಂತ ಕಂಪನಿಗಳು ಪಾಲ್ಗೊಳ್ಳಲಿವೆ. ಮೇ 19ರಂದು ಮಹಾರುದ್ರ ಯಾಗದ ಕೊನೆಯ ದಿನವಾಗಿದ್ದು ಪೂರ್ಣಾಹುತಿ ನಡೆಯಲಿದೆ. ಪ್ರತಿದಿನವೂ ಸಹ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ ಎಂದರು.

ಪ್ರತಿಭೆಗಳಿಗೆ ಪ್ರೋತ್ಸಾಹ

ಸ್ಥಳೀಯ ಕಲಾವಿದರಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ವಸ್ತು ಪ್ರದರ್ಶನ ನಡೆಯುವ ವೇದಿಕೆಯಲ್ಲಿ "ಪ್ರತಿಭೆ ನಿಮ್ಮದು&ವೇದಿಕೆ ನಮ್ಮದು' ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ 5ರಿಂದ ರಾತ್ರಿ 8ರ ವರೆಗೆ ನಡೆಯಲಿದೆ. ನಾಡಿನ ಪ್ರಖ್ಯಾತ ಕಲಾವಿದರುಗಳಿಂದಲೂ ಸಹ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಪ್ರತಿದಿನ ನಡೆಯಲಿದೆ. 40 ಸಾವಿರ ಮನೆಗಳಿಗೆ ಆಮಂತ್ರಣ ತಲುಪಿಸಲಾಗುತ್ತಿದೆ. ಮಹಿಳೆಯರೂ ಸೇರಿದಂತೆ ಐದು ಸಾವಿರ ಜನರಿಗೆ ಮಹಾರುದ್ರ ಯಾಗದಲ್ಲಿ ಸಂಕಲ್ಪದೊಂದಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಸಮಿತಿಯ ಕಚೇರಿ ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್​ ಕೊಡವೂರು, ತಾರಾನಾಥ್​ ಪೂಜಾರಿ, ರಮೇಶ್​ ಎಸ್​. ತಿಂಗಳಾಯ, ನಂದಕಿಶೋರ್​, ಬಾಲಕೃಷ್ಣ ಕೊಡವೂರು, ಧನಂಜಯ್​ ಮಲ್ಪೆ, ವಾದಿರಾಜ ಸಾಲಿಯಾನ್​, ಎ. ರಾಜ ಸೇರಿಗಾರ್​, ಡಾ. ವಿಜಯೇಂದ್ರ ವಸಂತ್​, ಹರಿಯಪ್ಪ ಕೋಟ್ಯಾನ್​ ಉಪಸ್ಥಿತರಿದ್ದರು. ಜನಾರ್ದನ್​ ಕೊಡವೂರು ಕಾರ್ಯಕ್ರಮ ನಿರ್ವಹಿಸಿದರು.

ಮಲ್ಪೆ ಬೀಚ್​ನಲ್ಲಿ ಗಂಗಾರತಿ, ಮಂಗ್ಲಿ ಗಾನಸುಧೆ

"

ಮಾನವರಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಕೇವಲ ಸ್ವಾರ್ಥಕ್ಕಾಗಿ ಬದುಕದೆ ಪರೋಪಕಾರಿಯಾಗಿ ಬದುಕಿದಾಗ ಜೀವನಕ್ಕೆ ಅರ್ಥ ಬರುತ್ತದೆ. ರುದ್ರನ ಆರಾಧನೆಯಿಂದ ರೋಗ-ರುಜಿನ ವಾಸಿಯಾದರೆ, ನಾರಾಯಣನ ಆರಾಧನೆಯಿಂದ ಜೀವನದ ಎಲ್ಲ ದು:ಖ-ಕಷ್ಟ ನಿವಾರಣೆ ಆಗುವುದು. ಅಂತಹ ಶಂಕರನಾರಾಯಣನ ಸನ್ನಿಧಿಯಲ್ಲಿ ಮಹಾರುದ್ರ ಯಾಗ ನಡೆಯುವುದು ಅತ್ಯಂತ ವಿಶೇಷ, ಶ್ರೇಷ್ಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net