ಸೋರುತ್ತಿದ್ದ ಮನೆಗೆ ದುರಸ್ತಿ ಭಾಗ್ಯ

 ಕಾಡಬೆಟ್ಟುಗುತ್ತಿನ ಬೈಲು ನಿವಾಸಿ ರಮಣಿಯವರ ಮನೆ  ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಗ್ಗ ವಲಯದ ಶೌರ್ಯ ತಂಡ.
ಕಾಡಬೆಟ್ಟುಗುತ್ತಿನ ಬೈಲು ನಿವಾಸಿ ರಮಣಿಯವರ ಮನೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಗ್ಗ ವಲಯದ ಶೌರ್ಯ ತಂಡ.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಪ್ರತೀ ವರ್ಷವೂ ಮಳೆಗಾಲದಲ್ಲಿ ಸೋರುತ್ತಿದ್ದ ಕಾಡಬೆಟ್ಟಗುತ್ತಿನ ಬೈಲು ನಿವಾಸಿ ರಮಣಿ ಅವರ ಮುರುಕಲು ಹೆಂಚಿನ ಮನೆ ದುರಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪ್ಪತ್ತು ನಿರ್ವಹಣ ಘಟಕ ಮುಂದಾಗಿದ್ದು, ಬಡಕುಟುಂಬಕ್ಕೆ ನೆರವಾಗುವುದರ ಜತೆಗೆ ಧೈರ್ಯ ತುಂಬುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಡೆದಿದೆ.
ಕಳೆದ ವರ್ಷ ರಮಣಿ ಅವರ ಮನೆ ಮೇಲೆ ಟರ್ಪಾಲು ಹಾಸಿ ನೀರು ಸೋರುವಿಕೆಯಿಂದ ತಾತ್ಕಾಲಿಕವಾಗಿ ರಕ್ಷಣೆ ಒದಗಿಸಲಾಗಿತ್ತು. ಈ ಬಾರಿ ಮಳೆಗಾಲ ಆರಂಭವಾಗುವುದಕ್ಕೂ ಮೊದಲೇ ಶೌರ್ಯ ತಂಡ ಕಾರ್ಯೋನ್ಮುಖವಾಗಿ ಮನೆಯ ಹೆಂಚಿನ ಛಾವಣಿ ಸಂಪೂರ್ಣ ದುರಸ್ತಿ ಮಾಡಿಕೊಡುವ ಮೂಲಕ ಬಡಕುಟುಂಬಕ್ಕೆ ನೆರವಾಗಿದೆ.

ಗುತ್ತಿನ ಯಜಮಾನರಿಂದ ಸಹಕಾರ

ಶೌರ್ಯ ತಂಡದ ಕಾರ್ಯಕ್ಕೆ ಆಲಂಪುರು ಗುತ್ತಿನ ಮನೆಯ ಯಜಮಾನ, ಉದ್ಯಮಿ ಶ್ರುತಾಂಜನ ಜೈನ್ ನೆರವಾಗಿದ್ದಾರೆ. ಮನೆಯ ದುರಸ್ತಿಗೆ ಕಚ್ಚಾ ಸಾಮಾಗ್ರಿ, ಸಲಕರಣೆ ಒದಗಿಸುವುದರ ಜತೆಗೆ ಶೌರ್ಯ ತಂಡದ ಸದಸ್ಯರ ಊಟದ ವೆಚ್ಚವನ್ನೂ ಭರಿಸಿದ್ದಾರೆ. ಮರದ ಕಾರ್ಯದಲ್ಲಿ ನುರಿತರಿದ್ದ ಧನುಪೂಜೆಯ ಶೌರ್ಯ ತಂಡದ ಇಬ್ಬರು ಸದಸ್ಯರು ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಶ್ರಮದಾನದಲ್ಲಿ ಶೌರ್ಯ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ ರೇಖಾ ಪಿ., ಸದಸ್ಯರಾದ ಸಂಪತ್ ಶೆಟ್ಟಿ, ಮೋಹನಂದ, ನಾರಾಯಣ್ ಶೆಟ್ಟಿ, ಅಶೋಕ ಹಾರೊದ್ದು, ಮಹಾಬಲ ರೈ, ಪವಿತ್ರಾ, ಶಶಿಕಲಾ, ಪವನ್, ರೋಹಿತ್, ಲಕ್ಷ್ಮಣ್, ವಿನೋದ್, ಅಶೋಕ ಬೊಳ್ಮಾರ್, ರಮೇಶ್, ನಾರಾಯಣ ಪೂಜಾರಿ, ಜನಾರ್ದನ, ಧನುಪೂಜೆ ಶೌರ್ಯ ಘಟಕ ಸದಸ್ಯರಾದ ಗಣೇಶ್ ಆಚಾರ್ಯ, ಪ್ರಮೋದ್ ಆಚಾರ್ಯ ಭಾಗವಹಿಸಿದ್ದರು.

ಮಾಸಾಶನದಿಂದ ಜೀವನ ನಿರ್ವಹಣೆ

ಬಡ ಕುಟುಂಬದವರಾದ ರಮಣಿ ಅವರು ಹೃದ್ರೋಗಿಯಾಗಿದ್ದು, ಅವರ ಪುತ್ರ ಮನೋರೋಗಿಯಾಗಿ ಮನೆಯಲ್ಲೇ ಇದ್ದಾರೆ. ಮಗಳು ಹಾಗೂ ಮೊಮ್ಮಗಳು ರಮಣಿ ಅವರಿಗೆ ನೆರವಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಸಾಶನವೂ ತಕ್ಕಮಟ್ಟಿಗೆ ಈ ಕುಟುಂಬಕ್ಕೆ ನೆರವಾಗುತ್ತಿದೆ. ಪ್ರತೀ ಮಳೆಗಾಲ ಎದುರಾದಗಲೂ ಮಣ್ಣಿನ ಗೋಡೆಯುಳ್ಳ ಮನೆ ಕುಸಿಯುವ ಭೀತಿ ರಮಣಿ ಅವರನ್ನು ಚಿಂತೆಗೀಡುಮಾಡಿತ್ತು. ಇದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಡಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.
"

ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಶೌರ್ಯ ವಿಪತ್ತು ನಿರ್ವಹಣ ಘಟಕ ಆರಂಭವಾಗಿ ಎರಡು ವರ್ಷಗಳು ಮಾತ್ರ ಕಳೆದಿವೆ. ಆದರೆ ನಮ್ಮ ಶೌರ್ಯ ಘಟಕ ಎರಡು ವರ್ಷದ ಅವಧಿಯಲ್ಲಿ ಸುಮಾರು 125ಕ್ಕೂ ಅಧಿಕ ಸೇವಾ ಕಾರ್ಯಗಳನ್ನು ನೆರವೇರಿಸಿದೆ. ಈ ಪೈಕಿ ರಮಣಿಯವರ ಮನೆ ದುರಸ್ತಿ ಕಾರ್ಯವೂ ಒಂದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net