ಗೀತೆಯಲ್ಲಿಯೇ ನೆಲೆಸಿದ್ದಾನೆ ಶ್ರೀಕೃಷ್ಣ

ಉಡುಪಿ ಶ್ರೀಕೃಷ್ಣನಿಗೆ ನವದೆಹಲಿಯ ದಾನಿ ಎಸ್​.ಲಕ್ಷ್ಮೀನಾರಾಯಣನ್​ ಅವರು ಕೊಡುಗೆಯಾಗಿ ನೀಡಿದ ಸ್ವರ್ಣ ಭಗವದ್ಗೀತಾ ಗ್ರಂಥವನ್ನು ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ, ವಿದ್ಯಾಶ್ರೀಶ ಶ್ರೀಗಳು ರಾಜಾಂಗಣದಲ್ಲಿ ಭಗವಂತನಿಗೆ ಅರ್ಪಿಸಿದರು.
ಉಡುಪಿ ಶ್ರೀಕೃಷ್ಣನಿಗೆ ನವದೆಹಲಿಯ ದಾನಿ ಎಸ್​.ಲಕ್ಷ್ಮೀನಾರಾಯಣನ್​ ಅವರು ಕೊಡುಗೆಯಾಗಿ ನೀಡಿದ ಸ್ವರ್ಣ ಭಗವದ್ಗೀತಾ ಗ್ರಂಥವನ್ನು ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ, ವಿದ್ಯಾಶ್ರೀಶ ಶ್ರೀಗಳು ರಾಜಾಂಗಣದಲ್ಲಿ ಭಗವಂತನಿಗೆ ಅರ್ಪಿಸಿದರು.
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* 'ಸುವರ್ಣ ಗೀತಾ ಗ್ರಂಥ' ಸಮರ್ಪಣೋತ್ಸವ

ಉಡುಪಿ: ಸಾಧನೆಯ ಮೂಲಕ ಜೀವನ ಅರ್ಥಪೂರ್ಣವಾಗಬೇಕು. ಸಮಾಜದ ಹಾಗೂ ದೇವರಸೇವೆಯ ಮೂಲಕ ಹತ್ತಾರು ಜನರಿಗೆ ಸಂತಸ ತಂದರೆ ಬದುಕು ಸಾರ್ಥಕ ಎಂದು ಶ್ರೀಕೃಷ್ಣನೇ ಗೀತೆಯಲ್ಲಿ ತಿಳಿಸಿದ್ದಾನೆ. ಗೀತೆಯಲ್ಲಿಯೇ ಶ್ರೀಕೃಷ್ಣ ನೆಲೆಸಿದ್ದಾನೆ ಎಂಬ ಸತ್ಯ ಗೀತೆ ಬರೆದವರಿಗೆ ಅನುಭೂತಿಯಾಗಿದೆ. ಎಲ್ಲರ ಹೃದಯದಲ್ಲಿ ಗೀತೆ ಅವ್ಯಕ್ತವಾಗಿದೆ. ಅದನ್ನು ವ್ಯಕ್ತ ಮಾಡುವುದಷ್ಟೇ ನಮ್ಮ ಕರ್ತವ್ಯ. ಅದನ್ನು ಜಾಗೃತಗೊಳಿಸಿದರೆ ಗೀತೆಯ ಪ್ರಚಾರ ಸುಲಭ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ (ಜ.8) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಖಾತೆಯ ನಿವೃತ್ತ ಕಾರ್ಯದರ್ಶಿ ಎಸ್​.ಲಕ್ಷ್ಮೀನಾರಾಯಣನ್​ ಅವರು ಬಂಗಾರದಲ್ಲಿ ತಯಾರಿಸಿಕೊಟ್ಟ 'ಸುವರ್ಣ ಗೀತಾ ಗ್ರಂಥ'ದ ಸಮರ್ಪಣೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕೃಷ್ಣನಿಗೆ ಸುವರ್ಣಾರಾಧನೆ

ನಾವು ಬಂಗಾರ ಧರಿಸಿದೆ ಭಗವಂತನನ್ನೇ ಸುವರ್ಣಮಯವನ್ನಾಗಿ ಮಾಡಬೇಕೆಂಬ ಇಚ್ಛೆಯನ್ನು ಶ್ರೀಕೃಷ್ಣ ಈಡೇರಿಸಿಕೊಂಡಿದ್ದಾನೆ. ತೀರ್ಥ ಮಂಟಪಕ್ಕೆ ಸುವರ್ಣ ಕವಚವನ್ನು ಪ್ರಧಾನಿ ನರೇಂದ್ರ ಮೋದಿ ಮೂಲಕ ಅರ್ಪಿಸಿದ್ದೇವೆ. ಪಾರ್ಥ ಸಾರಥಿ, ಸುವರ್ಣ ರಥ, ದಶಾವತಾರ ಸ್ವರ್ಣ ಕವಚ, ಕನಕನ ಕಿಂಡಿಗೆ ಸ್ವರ್ಣ ಕವಚ ಹಾಗೂ ಇದೀಗ ಸುವರ್ಣ ಗೀತಾ ಗ್ರಂಥ ಸಮರ್ಪಣೆ ಆಗಿದೆ. ಇದೆಲ್ಲವೂ ಭಕ್ತರ ಸಹಕಾರದಲ್ಲೇ ನಡೆದಿದ್ದು, ಎಲ್ಲವೂ ಭಗವಂತನ ಪವಾಡವೇ ಆಗಿದೆ. ಈ ಎಲ್ಲ ವ್ಯವಸ್ಥೆಯೂ ಶ್ರೀಕೃಷ್ಣನ ಯೋಜನೆಯೇ ಆಗಿದೆ. ನಾವೆಲ್ಲರೂ ನಿಮಿತ್ತ ಮಾತ್ರ. ಗೀತೆಯನ್ನು ಇದುವರೆಗೂ ಎಲ್ಲಿಯೂ ಸುವರ್ಣಾಕ್ಷರಗಳಲ್ಲಿ ಬರೆದಿಲ್ಲ. ಈ ದಿನವೂ ಸಹ ಕೃಷ್ಣ ಮಠದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವೇ ಆಗಿದೆ ಎಂದರು.

ಭಾರತದ ದಿವ್ಯವಾದ ಸಂಪತ್ತು

ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ವಿದ್ಯೆಯೇ ವೇದಾಂತ ವಿದ್ಯೆಯಾಗಿದ್ದು ಅದು ವಿಭೂತಿ ರೂಪದಲ್ಲಿದೆ. ವೇದಾಂತ ಶಾಸ್ತ್ರಗಳ ಮೂಲದಲ್ಲಿ ಗೀತೆ ವಿಶಿಷ್ಟ ಸ್ಥಾನ ಹೊಂದಿದೆ. ಅನಂತ ವೇದಗಳ ಸಾರವೇ 700 ಶ್ಲೋಕಗಳನ್ನು ಒಳಗೊಂಡ ಭಗವದ್ಗೀತೆಯಾಗಿದೆ. ವಿಶ್ವದಲ್ಲೀಗ ಯುದ್ಧದ ಭೀತಿ ಆವರಿಸಿದೆ. ನಾಳೆ ಯಾವ ದೇಶದ ನಡುವೆ ಯುದ್ಧ ನಡೆಯುತ್ತದೆಯೋ ಎಂಬ ಭೀತಿ ಆವರಿಸಿದೆ. ಆ ಭೀತಿ ನಿವಾರಣೆಯಾಗಲು ಭಾರತದ ದೈವೀ ಹಾಗೂ ದಿವ್ಯವಾದ ಸಂಪತ್ತಾದ ಭಗವದ್ಗೀತೆಯೆಂಬ ಶಕ್ತಿಯಿಂದ ಮಾತ್ರ ಸಾಧ್ಯ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಸುವರ್ಣ ಗೀತಾ ಗ್ರಂಥದ ದಾನಿ ಕೇಂದ್ರ ಗೃಹ ಖಾತೆಯ ನಿವೃತ್ತ ಕಾರ್ಯದರ್ಶಿ ಎಸ್​.ಲಕ್ಷ್ಮೀನಾರಾಯಣನ್​, ಇಸ್ರೋ ನಿವೃತ್ತ ಉಪ ನಿರ್ದೇಶಕ ಡಾ. ಎಸ್​.ವಿ. ಶರ್ಮಾ, ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​, ಪಂಡರಾಪುರದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ಸಹ ಅಧ್ಯಕ್ಷ ಸದ್ಗುರು ಗಹನೀನಾಥ್​ ಜ್ಞಾನೇಶ್ವರ ಮಹಾರಾಜ್​ ಔಸೇಕರ್​, ಆಳಂದ ಶ್ರೀ ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜ್​ ಪೀಠದ ಪ್ರಧಾನ ಅರ್ಚಕ ಗಿರೀಶ್​ ತುಕ್ರಿ, ಲೆಕ್ಕ ಪರಿಶೋಧಕ ಹರಿಕೃಷ್ಣ ಚೆನ್ನೆ$, ಬೆಂಗಳೂರಿನ ಅಶ್ವಿನ್​ ಶ್ರೀನಿವಾಸ, ಉದ್ಯಮಿಗಳಾದ ಮುಂಬಯಿಯ ಹಿಮಾಂಶು ಹಾಗೂ ನಟರಾಜ್​ ಅವರಿಗೆ 'ಶ್ರೀಕೃಷ್ಣಗಿತಾನುಗ್ರಹ' ಪ್ರಶಸ್ತಿ ನೀಡಿ ಶ್ರೀಗಳು ಸನ್ಮಾನಿಸಿದರು. ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಕೇಶವ ಆಚಾರ್ಯ ಸಾಮಗಾನ ಪಠಿಸಿದರು. ಪುತ್ತಿಗೆ ಮಠದ ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಠದ ದಿವಾನ ನಾಗರಾಜ್​ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ರಮಣ ಆಚಾರ್ಯ, ರತೀಶ್​ ತಂತ್ರಿ ಸಹಕರಿಸಿದರು.

ಸನಾತನ ಧರ್ಮವೇ ವೈಜ್ಞಾನಿಕ ಯಶಸ್ಸಿನ ಶಕ್ತಿ

"

ಭಗವದ್ಗೀತೆ ಅತ್ಯಂತ ಶ್ರೇಷ್ಠವಾದ ಹಾಗೂ ಮನದಿಂಗಿತ ಈಡೇರಿಸುವ ಪವಾಡದ ಗ್ರಂಥ. ಶ್ರೀಕೃಷ್ಣನ ಪ್ರೇರಣೆಯಿಂದಲೇ ಸ್ವರ್ಣ ಭಗವದ್ಗೀತಾ ಗ್ರಂಥವನ್ನು ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಿದ್ದೇನೆ. ಇದರಲ್ಲಿ ಒಂದು ಹಾಳೆಯಲ್ಲಿ 5 ಶ್ಲೋಕದಂತೆ ಒಟ್ಟು 700 ಶ್ಲೋಕವಿದೆ. ಶ್ರೀಕೃಷ್ಣ ಕೇವಲ ಭಾರತಕ್ಕೆ ಮಾತ್ರ ಸೀಮಿತನಲ್ಲ. ಆತನ ಜಗದೊಡೆಯ, ವಿಶ್ವಗುರುವಾಗಿದ್ದಾನೆ. ಪುತ್ತಿಗೆ ಶ್ರೀಗಳು ಗೀತಾ ಲೇಖನ ಅಭಿಯಾನ ನಿಲ್ಲಿಸದೇ, ಕಷ್ಟ-ದುಗುಡದಲ್ಲಿರುವ ಜನರಿಗೆ ಪರಿಹಾರ ಒದಗಿಸಲು ಅದನ್ನು ಮುಂದುವರಿಸಬೇಕೆಂದು ವಿನಂತಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net