ಸರ್ವ ವಿಘ್ನಗಳಿಗೂ ಶ್ರೀಕೃಷ್ಣನೇ ಔಷಧ

ಉಡುಪಿಯ ರಾಜಾಂಗಣದಲ್ಲಿ ಶೀರೂರು ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯದ ಸಂಜೆಯ ದರ್ಬಾರ್​ನಲ್ಲಿ ಪುರಂದರ ದಾಸರ ಆರಾಧನೆ ಹಾಗೂ ಶ್ರೀಗಳ ನಿರಂತರ ಜ್ಞಾನ ಯಜ್ಞ ಕಾರ್ಯಕ್ರಮವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಸತ್ಯಾತ್ಮ ಶ್ರೀ, ವಿದ್ಯಾವಲ್ಲಭ ಶ್ರೀ, ವಿದ್ಯಾಧಿರಾಜ ಶ್ರೀ, ಸುಜಯನಿಧಿ ಶ್ರೀ, ಡಾ.ಉದಯಕುಮಾರ್​ ಸರಳತ್ತಾಯ, ಡಾ. ಸಗ್ರಿ ಆನಂದ ತೀರ್ಥ ಇದ್ದರು.
ಉಡುಪಿಯ ರಾಜಾಂಗಣದಲ್ಲಿ ಶೀರೂರು ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯದ ಸಂಜೆಯ ದರ್ಬಾರ್​ನಲ್ಲಿ ಪುರಂದರ ದಾಸರ ಆರಾಧನೆ ಹಾಗೂ ಶ್ರೀಗಳ ನಿರಂತರ ಜ್ಞಾನ ಯಜ್ಞ ಕಾರ್ಯಕ್ರಮವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಸತ್ಯಾತ್ಮ ಶ್ರೀ, ವಿದ್ಯಾವಲ್ಲಭ ಶ್ರೀ, ವಿದ್ಯಾಧಿರಾಜ ಶ್ರೀ, ಸುಜಯನಿಧಿ ಶ್ರೀ, ಡಾ.ಉದಯಕುಮಾರ್​ ಸರಳತ್ತಾಯ, ಡಾ. ಸಗ್ರಿ ಆನಂದ ತೀರ್ಥ ಇದ್ದರು.
Published on

* ಸತ್ಯಾತ್ಮ ತೀರ್ಥ ಶ್ರೀಪಾದರ ಆಶೀರ್ವಚನ 

* ಶೀರೂರು ಪರ್ಯಾಯದ ನಿರಂತರ ಜ್ಞಾನಯಜ್ಞ ಉದ್ಘಾಟನೆ

ಉಡುಪಿ: ಯಾರಾದರೂ ಕೆಟ್ಟ ಕೆಲಸ ಮಾಡುವಾಗ ಅವರಿಗೆ ವಿಘ್ನಗಳೇ ಬರುವುದಿಲ್ಲ. ಎಲ್ಲ ರೀತಿಯ ಅನುಕೂಲಗಳೂ ಅವರಿಗಾಗುತ್ತದೆ. ಆದರೆ, ಪುಣ್ಯ ಕಾರ್ಯಕ್ಕೆ ನೂರೆಂಟು ವಿಘ್ನಗಳು ಕಾಡುತ್ತವೆ. ಇದಕ್ಕೆ ಪರಿಹಾರ, ಉಪಾಯ, ಔಷಧವೇನೆಂದರೆ ಶ್ರೀಕೃಷ್ಣ ಪರಮಾತ್ಮನಿಗೆ ಶರಣಾಗುವುದೇ ಆಗಿದೆ. ರೋಗಕ್ಕೆ ಸರಿಯಾಗಿ, ಸಕಾಲಕ್ಕೆ ಚಿಕಿತ್ಸೆ ಮಾಡದಿದ್ದರೆ ಮರಣ ಸಂಭವಿಸುತ್ತದೆ. ಹೀಗಾಗಿ ಸಕಲ ಪಾಪ, ದೋಷಗಳ ನಿವಾರಣೆಗೆ ಶ್ರೀಕೃಷ್ಣನೇ ಔಷಧನಾಗಿದ್ದಾನೆ ಎಂದು ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಪ್ರಥಮ ದಿನ ಭಾನುವಾರ (ಜ.18) ಸಂಜೆಯ ದರ್ಬಾರ್​ನಲ್ಲಿ ಶೀರೂರು ಶ್ರೀಗಳ ನಿರಂತರ ಜ್ಞಾನ ಯಜ್ಞ ಹಾಗೂ ಪುರಂದರ ದಾಸರ ಆರಾಧನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗುರು ಪರಂಪರೆಯಿಂದ ಧರ್ಮದ ರಕ್ಷಣೆ

ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಇತಿಹಾಸದಲ್ಲಿ ಉಡುಪಿಯ ಪರ್ಯಾಯ ಬಹಳ ವಿಶೇಷವಾದ ಅಧ್ಯಾಯ. ಮಧ್ವಾಚಾರ್ಯರು ಪ್ರತಿಷ್ಠಾಪಿತ ಶ್ರೀಕೃಷ್ಣನ ಆರಾಧನೆಯ ದ್ವೈವಾರ್ಷಿಕ ಸೇವೆಯ ಈ ಪರ್ಯಾಯ ಅವಿಚ್ಛಿನ್ನವಾಗಿ ಮುಂದುವರಿದಿದೆ. ಶತಶತಮಾನಗಳಿಂದ ಮತಾಂತರ, ಭೀಕರ ಕಾಯಿಲೆ, ಅನ್ಯ ಧಮೀರ್ಯರ ದಾಳಿ, ಅನೇಕ ಬಾರಿ ಭೂಕಂಪ, ಹಲವು ಏಳು-ಬೀಳುಗಳ ನಡುವೆಯೂ ಸನಾತನ ಹಿಂಧೂ ಧರ್ಮವೂ ಸಹ ಅವಿಚ್ಛಿನ್ನವಾಗಿ ಮುಂದುವರಿದು ಇಂದಿಗೂ ಜೀವಂತವಾಗಿದೆ. ಅದಕ್ಕೆ ನಮ್ಮ ಗುರು ಪರಂಪರೆಯೇ ಕಾರಣವಾಗಿದೆ. ಮಠ ಮಾನ್ಯಗಳಿಗೆ ಹಿಂದೆ ಲಭಿಸುತ್ತಿದ್ದ ರಾಜಾಶ್ರಯ ಈಗ ಲಭಿಸುತ್ತಿಲ್ಲ. ಇಂದಿನ ಸೆಕ್ಯುಲರ್​ ರಾಜಕಾರಣದಿಂದ ಮಠ-ಮಂದಿರಗಳು ಸರ್ಕಾರದ ಆಸರೆಯಿಂದ ದೂರವೇ ಇರುವಂತಾಗಿದೆ. ಹೀಗಾಗಿ ಸಮಾಜ, ಭಕ್ತರಿಂದ ಅವು ಅಭಿವೃದ್ಧಿ ಕಾಣುತ್ತಿವೆ. ಬ್ರಹ್ಮಚಾರಿಗಳನ್ನು, ಗುರುಗಳನ್ನು ಗೃಹಸ್ಥರು ಪೋಷಿಸಬೇಕಿದೆ. ಅದು ಕರ್ತವ್ಯವೂ ಆಗಿದೆ ಎಂದರು.

ವಿವಿಧ ಶ್ರೀಪಾದರಿಂದ ಶುಭಹಾರೈಕೆ

ತುಂಬಿಹಳ್ಳಿ ಮಾಧವ ತೀರ್ಥ ಸಂಸ್ಥಾನದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕಣ್ವ ಮಠದ ವಿದ್ಯಾಧಿರಾಜ ತೀರ್ಥ ಶ್ರೀಪಾದರು, ಮುಳಬಾಗಿಲು ಶ್ರೀಪಾದರಾಜ ಮಠದ ಸುಜಯನಿಧಿ ತೀರ್ಥ ಶ್ರೀಪಾದರು ಮಾತನಾಡಿ, ಶೀರೂರು ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಯಶಸ್ವಿಯಾಗಿ ನೆರವೇರಲಿ. ತಮಗೆ ಸದಾ ನಮ್ಮೆಲ್ಲರ ಬೆಂಬಲವಿದೆ ಎಂದು ತಿಳಿಸಿ, ಹರಸಿದರು. 
ಬೆಳ್ತಂಗಡಿ ಶಾಸಕ ಪ್ರತಾಪ್​ ಸಿಂಹ ನಾಯಕ್​ ದಂಪತಿಗೆ ಶೀರೂರು ಶ್ರೀಗಳು ಅನುಗ್ರಹಿಸಿದರು. ಮಠದ ವಿದ್ವಾನ್​ ಡಾ. ಸಗ್ರಿ ಆನಂದ ತೀರ್ಥ ಕಾರ್ಯಕ್ರಮ ನಿರೂಪಿಸಿದರು. ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ವಂದಿಸಿದರು.  

ಆಕಾಶ-ಭೂಮಿ ಒಂದಾದ ಪರಿಸ್ಥಿತಿಯಾಗಿದೆ

ಶೀರೂರು ವೇದವರ್ಧನ ಶ್ರೀ ಮಾತನಾಡಿ, ನಿನ್ನೆ ಒಂದು ದಿನ ನಿದ್ದೆ ಬಿಟ್ಟಿದ್ದರಿಂದ ನಮಗೆ ಆಕಾಶ-ಭೂಮಿ ಒಂದಾದ ಪರಿಸ್ಥಿತಿಯ ಅನುಭವವಾಗಿದೆ ಎಂದು ಹಾಸ್ಯಚಟಾಕಿ ಸಿಡಿಸಿದರು. ಪ್ರಥಮ ಪರ್ಯಾಯದಲ್ಲಿ ಶ್ರೀಕೃಷ್ಣನ ಬೆಳಗ್ಗೆಯ ಪ್ರಥಮ ಪೂಜೆಯು ಉಡುಪಿಯ ಅಷ್ಟ ಮಠಗಳ ಗುರುಗಳ ಸಹಕಾರದಲ್ಲಿ ನಡೆದಿದೆ. ಸಂಜೆಯ ಪೂಜೆಯು ಪದ್ಮರಾಜ ತೀರ್ಥ ಶ್ರೀಪಾದರ ಶಿಷ್ಯರ ಸಹಕಾರದಲ್ಲಿ ನಡೆದಿದೆ. ಅಡುಗೆಯಲ್ಲಿ ಉಪ್ಪು ಹೆಚ್ಚು-ಕಡಿಮೆಯಾದರೂ ಸರಿಪಡಿಸಿಕೊಂಡು ಊಟ ಮಾಡುವಂತೆ ಶ್ರೀಕೃಷ್ಣನ ಸೇವಾ ಕೈಂಕರ್ಯದಲ್ಲಿಯೂ ಸಹ ಸೂಕ್ತವಾದ ಮತ್ತು ಸಂಪ್ರದಾಯಬದ್ಧ ಪೂಜೆ ನೆರವೇರಿಸಲು ಕಿರಿಯನಾದ ನಮಗೆ ಎಲ್ಲ ಹಿರಿಯ ಶ್ರೀಪಾದರ ಅನುಗ್ರಹ, ಮಾರ್ಗದರ್ಶನ ಬೇಕು. ಇಂದು ಪುರಂದರ ದಾಸರ ಆರಾಧನೆ. ವ್ಯಾಸ ಸಾಹಿತ್ಯ ಎಲ್ಲರಿಗೂ ಸುಲಭವಾಗಿ ಅರ್ಥವಾಗದು. ಆದರೆ, ದಾಸ ಸಾಹಿತ್ಯ ಎಲ್ಲರಿಗೂ ಸರಳವಾಗಿ ತಿಳಿಯುತ್ತದೆ. ಪುರಂದರ ದಾಸರೂ ಸೇರಿದಂತೆ ಎಲ್ಲ ದಾಸರುಗಳ ಸಾಹಿತ್ಯದಿಂದ ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಬಹುದಾಗಿದೆ. ಲೌಖಿಕ ಸುಖ ಶಾಶ್ವತವಲ್ಲ. ಅದರ ಹಿಂದೆ ಹೋದರೆ ಸುಖವೂ ಸಿಗದು, ಭಗವಂತನೂ ಸಿಗಲಾರ ಎಂದರು. 

ಶಿವಶ್ರೀ ನಾಮಸಂಕೀರ್ತನೆ..

ಶೀರೂರು ಪರ್ಯಾಯದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ತ ಭಾನುವಾರ ರಾತ್ರಿ ರಾಜಾಂಗಣದಲ್ಲಿ ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿಸೂರ್ಯ ಅವರಿಂದ 'ನಾಮ ಸಂಕೀರ್ತನೆ' ನಡೆಯಿತು. ಹಾಮೋರ್ನಿಯಂನಲ್ಲಿ ಗೌರವ್​ ಗಡಿಯಾರ, ಮೃದಂಗದಲ್ಲಿ ಅನಿರುದ್ಧ ಭಟ್​, ತಬಲಾದಲ್ಲಿ ಪ್ರದ್ಯುಮ್ನ ಕರ್ಪೂರ ಸಹಕರಿಸಿದರು. ಅರವಿಂದ ಹೆಬ್ಬಾರ್​ ಕಲಾವಿದರನ್ನು ಸ್ವಾಗತಿಸಿ, ಪರಿಚಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net