

ಉಡುಪಿ: ಭಗವದ್ಗೀತೆ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಅದು ಸಮಸ್ತ ವಿಶ್ವದ ಕಲ್ಯಾಣಕ್ಕಾಗಿ ಶ್ರೀಕೃಷ್ಣ ನೀಡಿದ ದಿವ್ಯಜ್ಞಾನ. ಜೀವನದ ಸಮಸ್ಯೆಗಳನ್ನು ಧೈರ್ಯ ಮತ್ತು ವಿವೇಕದಿಂದ ಎದುರಿಸಲು ಗೀತೆ ಮಾರ್ಗದರ್ಶನ ನೀಡುತ್ತದೆ. ಕುಟುಂಬದ ಪ್ರತಿಯೊಂದು ಸಂಬಂಧವನ್ನೂ ಶ್ರೀಕೃಷ್ಣನ ಅನುಗ್ರಹವೆಂದು ಭಾವಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಪುತ್ತಿಗೆ ಮಠದ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಐತಿಹಾಸಿಕ ಚತುರ್ಥ ವಿಶ್ವ ಗೀತಾ ಪರ್ಯಾಯೋತ್ತರ ವಿಶ್ವಸಂಚಾರ ಕೈಗೊಂಡಿರುವ 'ಯತಿಕುಲ ಚಕ್ರವರ್ತಿ' ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಡಲ್ಲಾಸ್ ನಗರದಲ್ಲಿ ಭಕ್ತರು ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಡಲ್ಲಾಸ್ನಲ್ಲಿ ಮತ್ತೊಂದು ವೃಂದಾವನ
ವೇಗವಾಗಿ ಬೆಳೆಯುತ್ತಿರುವ ಡಲ್ಲಾಸ್ನಲ್ಲಿ ಶ್ರೀಕೃಷ್ಣ ವೃಂದಾವನವು ವಿಶಾಲವಾದ ಧಾರ್ಮಿಕ ಮತ್ತು ಸಾಂಸತಿಕ ಕೇಂದ್ರವಾಗಿ ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ಮತ್ತೊಂದು ವಿಶಾಲ ಸ್ಥಳ ಪರಿಶೀಲಿಸಲಾಗುತ್ತಿದ್ದು ಶೀಘ್ರದಲ್ಲಿಯೇ ಶ್ರೀಕೃಷ್ಣನ ಸುಂದರವಾದ ವೃಂದಾವನ ನಿಮಾರ್ಣವಾಗಲಿದೆ. ಮುಂದಿನ ಪೀಳಿಗೆಯ ಕಲ್ಯಾಣದ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಇದಕ್ಕೆ ಶ್ರೀಕೃಷ್ಣನ ಪೂರ್ಣಾನುಗ್ರಹವಿರಲಿ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಮಾತನಾಡಿ, ಶ್ರೀಪಾದರ ತಪಸ್ಸು, ಸರಳತೆ, ಕರುಣೆ ಹಾಗೂ ವಿಶ್ವವ್ಯಾಪಿ ಧಾರ್ಮಿಕ ಸೇವೆ ಶ್ಲಾಘನೀಯ ಎಂದರು. ಗುರುಗಳು ಆರಂಭಿಸಿದ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಗುರುಸೇವೆ ಎಂದು ಅಭಿಪ್ರಾಯಪಟ್ಟರು.
ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮಾತನಾಡಿ, ಚತುರ್ಥ ವಿಶ್ವ ಗೀತಾ ಪರ್ಯಾಯದ ಮಹತ್ವ, ಕೋಟಿ ಗೀತಾ ಲೇಖನ ಯಜ್ಞದ ಪ್ರಭಾವ ಹಾಗೂ ಜನರಿಗಾದ ದೇವಾನುಗ್ರಹ ಮತ್ತು ಚತುರ್ಥ ಪರ್ಯಾಯದಲ್ಲಿ ಕೈಗೊಂಡಿದ್ದ ಪ್ರಮುಖ ಕಾರ್ಯ ಸಾಧನೆ ಕುರಿತು ಮಾಹಿತಿ ನೀಡಿದರು.
ಭರತ ಠಾಕೂರ, ಸುರೇಶ ಮಂಡುವ, ಸಾಯಿಕೃಷ್ಣ, ವಿದ್ಯಾ, ಆದ್ಯಾ, ಹೇಮಂತಕುಮಾರ, ಅಭದೇಶ ಭಟ್ಟ, ಸುವರ್ಣಾ, ಸುಬ್ರಹ್ಮಣ್ಯ ಆಚಾರ್ಯ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವಾವಸು ಪೌದ್ದಾರ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಲ್ಲಾಸ್ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕ ವಾದಿರಾಜ ಭಟ್ಟ ವಂದಿಸಿದರು.